ಮಂಗಳೂರು: ಚೀಟಿ ಹಣವನ್ನು ತೀರಿಸಲಾಗದೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ದಂಪತಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಮಂಗಳೂರಿನ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಪಿಂಟೋಲೇನ್ ಚೌಟಾಸ್ ಕಂಪೌಂಡ್ನಲ್ಲಿ ನಡೆದಿದೆ.
ಚೌಟಾಸ್ ಕಂಪೌಂಡ್ ನಿವಾಸಿಗಳಾದ ಸುರೇಶ್ ಶೆಟ್ಟಿ(62) ಹಾಗೂ ವಾಣಿ ಶೆಟ್ಟಿ(52) ಮೃತ ದುರ್ದೈವಿಗಳು. ವಾಣಿ ಶೆಟ್ಟಿಯವರ ಮೃತದೇಹ ಅವರದ್ದೇ ಮನೆಯ ಟೆರೇಸ್ನಲ್ಲಿಯೇ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಸುರೇಶ್ ಶೆಟ್ಟಿಯವರ ಮೃತದೇಹ ಅವರ ಮನೆಯ ಎದುರುಗಡೆಯ ನವೀನ್ ಎಂಬವರ ಬಾವಿಯಲ್ಲಿ ಪತ್ತೆಯಾಗಿದೆ.
ವಾಣಿ ಶೆಟ್ಟಿಯವರು ನೇಣು ಬಿಗಿದು ಆತ್ಮಹತ್ಯೆಗೈದಿರುವ ಬಗ್ಗೆ ಬೆಳ್ಳಂಬೆಳಗ್ಗೆ ಪತಿ ಸುರೇಶ್ ಶೆಟ್ಟಿಯವರು ವಾಣಿ ಶೆಟ್ಟಿಯವರ ಸಹೋದರಿಯರಿಗೆ ತಿಳಿಸಿ, ತನಗೆ ಇದರಿಂದ ದುಃಖವಾಗುತ್ತಿದೆ ಎಂದು ಹೇಳಿದ್ದಾರೆ. ಆ ಬಳಿಕ ಎಲ್ಲರೂ ಬಂದ ಸಂದರ್ಭ ಸುರೇಶ್ ಶೆಟ್ಟಿಯವರು ನಾಪತ್ತೆಯಾಗಿದ್ದಾರೆ. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಆದರೆ ಅವರ ಡೆತ್ ನೋಟ್ ದೊರಕಿದ್ದು, ಅದರಲ್ಲಿ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿತ್ತು. ಬಳಿಕ ಬಾವಿಯಲ್ಲಿ ನೋಡಿದಾಗ ಅವರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ.
ಇಬ್ಬರ ಮೃತದೇಹವನ್ನು ಶವ ಮಹಜರು ಮಾಡಲು ವೆನ್ಲಾಕ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸುರೇಶ್ ಶೆಟ್ಟಿಯವರು ಸ್ಥಳೀಯ ಪ್ರಿಂಟಿಂಗ್ ಪ್ರೆಸ್ನಲ್ಲಿ ನೌಕರಿ ಮಾಡುತ್ತಿದ್ದು, ತಬಲ ವಾದಕರೂ ಆಗಿದ್ದರು. ವಾಣಿ ಶೆಟ್ಟಿಯವರು ದಾದಿಯಾಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರು ಚೀಟಿ ವ್ಯವಹಾರ ನಡೆಸುತ್ತಿದ್ದು, ಲಾಕ್ ಡೌನ್ ಬಳಿಕ ಇವರಿಂದ ದುಡ್ಡು ಪಡೆದ ಯಾರೂ ಚೀಟಿ ದುಡ್ಡು ಕಟ್ಟುತ್ತಿರಲಿಲ್ಲ. ಅದೇ ರೀತಿ ಇವರು ಹಣ ಕೊಡಬೇಕಾದವರು ಬಂದು ಇವರಿಂದ ಹಣ ಕೇಳುತ್ತಿದ್ದರು. ಅದೇ ರೀತಿ ಹಣ ಪಡೆದವರು ಹಣ ಕೊಡದೆ ಸತಾಯಿಸುತ್ತಿದ್ದರು, ಬೆದರಿಕೆಯನ್ನೂ ಹಾಕುತ್ತಿದ್ದರು. ಇದರಿಂದ ಆರ್ಥಿಕವಾಗಿ ಭಾರೀ ಕುಸಿದು ಹೋಗಿದ್ದ ಇವರು ಇದರಿಂದ ನೋವಿನಲ್ಲಿದ್ದರು. ಈ ಕಾರಣದಿಂದ ದಂಪತಿ ಆತ್ಮಹತ್ಯೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಈ ಬಗ್ಗೆ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್ ಅವರು ತಿಳಿಸಿದ್ದಾರೆ.