ಕಲಬುರಗಿ: ಪಿಎಸ್ಐ ಪರೀಕ್ಷೆ ಅಕ್ರಮ ಪ್ರಕರಣ ತನಿಖೆಗೆ ಸಿಐಡಿ ಇಳಿದಿದೆ. ಆರೋಪಿಗಳು ಹೇಗೆಲ್ಲಾ ಅಕ್ರಮ ಎಸಗುತ್ತಿದ್ದರು ಎಂಬುವುದನ್ನು ಕಂಡು ಸಿಐಡಿ ಅಧಿಕಾರಿಗಳೇ ದಂಗಾಗಿದ್ದಾರೆ. ಅಕ್ರಮದ ಪ್ರಮುಖ ರೂವಾರಿ ಆರ್.ಡಿ ಪಾಟೀಲ್ ತಂಡ ಬ್ಲೂಟೂತ್ ಡಿವೈಸ್ ಬಳಸಿ ಪರೀಕ್ಷೆ ಬರೆಸುತ್ತಿದ್ದರು ಎಂಬುವುದನ್ನು ಈಗಾಗಲೇ ಪತ್ತೆ ಮಾಡಿದ್ದಾರೆ.
ಪ್ರಕರಣ ಸಂಬಂಧ ಆರ್.ಡಿ. ಪಾಟೀಲ್, ಮಹಾಂತೇಶ ಪಾಟೀಲ್ ಸೇರಿ ಹಲವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಒಂದೊಂದೇ ರೋಚಕ ಕತೆಗಳು ಬಯಲಾಗುತ್ತಿವೆ. ಮ್ಯಾಕ್ರೋ ಬ್ಲೂಟೂತ್, ಮೈಕ್ರೋ ಡಿವೈಸ್ ಬಳಸಿ ಅಭ್ಯರ್ಥಿಗಳಿಗೆ ಉತ್ತರ ಹೇಳಲು ಸಿಸ್ಟಮ್ಯಾಟಿಕ್ ಪ್ಲಾನ್ ಮಾಡುತ್ತಿದ್ದರು. ಪರೀಕ್ಷೆ ಅಕ್ರಮಕ್ಕೆ ಡಿವೈಸ್ ಎಕ್ಸ್‌ಪರ್ಟ್ ಟೀಂ ಬಳಕೆ ಮಾಡುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಪಿಎಸ್ಐ ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಬಳಕೆ : ವಿಡಿಯೋ
ಅಭ್ಯರ್ಥಿಗಳನ್ನು ಹುಡುಕಿ ಹುಡುಕಿ ಆರ್.ಡಿ. ಪಾಟೀಲ್ ಡೀಲ್ ಫಿಕ್ಸ್ ಮಾಡುತ್ತಿದ್ದ. ಗಮನಾರ್ಹ ಅಂಶ ಎಂದರೆ ಅಕ್ರಮದಲ್ಲಿಯೂ ಪಾಟೀಲ್ ಸಹೋದರರು ಜಾತಿ ಪ್ರೇಮ ಮೆರೆದಿದ್ದಾರೆ ಎನ್ನಲಾಗ್ತಿದೆ. ಪ್ರತಿ ಅಭ್ಯರ್ಥಿಗೆ ಗರಿಷ್ಠ 60 ಲಕ್ಷ ರೂ. ಫಿಕ್ಸ್ ಮಾಡುತ್ತಿದ್ದ ಆರೋಪಿಗಳು ತಮ್ಮ ಜಾತಿಯ ಅಭ್ಯರ್ಥಿಗಳು ಎಷ್ಟು ಕೊಟ್ಟರು ಸೈ ಎನ್ನುತ್ತಿದ್ದರು. ಶಾಸಕರ ಗನ್‌ಮ್ಯಾನ್ ಹಯ್ಯಾಳಿ ದೇಸಾಯಿ 30 ಲಕ್ಷಕ್ಕೆ ವ್ಯಾಪಾರ ಕುದುರಿಸಿಕೊಂಡಿದ್ದನಂತೆ.
ಸಿಐಡಿ ತಂಡಕ್ಕೆ ಬಗೆದಷ್ಟು ರೋಚಕ ವಿಚಾರಗಳು ಬಯಲಾಗುತ್ತಿವೆ. ಡಿವೈಸ್ ಬಳಕೆ ಮಾಡಿ ಪಾಸಾದ ಮೂವರು ಅಭ್ಯರ್ಥಿಗಳು ಸಿಐಡಿ ಬಲೆಗೆ ಬಿದ್ದಿದ್ದು,ಮತ್ತಷ್ಟು ಅಭ್ಯರ್ಥಿಗಳು ಪರೀಕ್ಷಾ ಅಕ್ರಮದಲ್ಲಿ ಶಾಮಿಲಾಗಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಪಿಎಸ್ಐ ಅಕ್ರಮ ನೇಮಕಾತಿ: ಮತ್ತೋರ್ವ ಅಭ್ಯರ್ಥಿ ಬಂಧಿಸಿದ ಸಿಐಡಿ