ಕಲಬುರಗಿ : 545 ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ತೆಲೆ ಮರೆಸಿಕೊಂಡಿದ್ದ ದಿವ್ಯಾ ಹಾಗರಗಿ & ಗ್ಯಾಂಗ್, ಇವರಿಗೆ ಆಶ್ರಯ ನೀಡಿದ್ದ ಮಹಾರಾಷ್ಟ್ರದ ಸೋಲಾಪುರದ ಉದ್ಯಮಿ ಸುರೇಶ್ ಮತ್ತು ಕಾಳಿದಾಸನನ್ನೂ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ತಡರಾತ್ರಿ ದಿವ್ಯಾ ಮತ್ತು ಗ್ಯಾಂಗ್ ಅನ್ನು ಪುಣೆಯಲ್ಲಿ ಬಂಧಿಸಲಾಗಿದೆ.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆ ನೇಮಕಾತಿ ಪರೀಕ್ಷಾ ಅಕ್ರಮದ ಕೇಂದ್ರಬಿಂದು ಜ್ಞಾನಜ್ಯೋತಿ ಶಾಲೆಯ ಒಡತಿ ದಿವ್ಯಾ ಹಾಗರಗಿ ಹಾಗೂ ಉದ್ಯಮಿ ಸುರೇಶ ಸುಮಾರು ದಿನಗಳಿಂದ ಪರಿಚಿತರಾಗಿದ್ದು, ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಉದ್ಯಮಿ ಸುರೇಶ್ ಮನೆಯಲ್ಲಿ ತನ್ನ ಗ್ಯಾಂಗ್ ಜತೆ ದಿವ್ಯಾ ಅಲ್ಲಿಯೇ ಆಶ್ರಯ ಪಡೆದಿದ್ದಳು ಎಂದು ತಿಳಿದು ಬಂದಿದೆ.
ತೆಲೆ ಮರೆಸಿಕೊಂಡಿದ್ದ ಆರೋಪಿಗಳು 18 ದಿನಗಳಿಂದ ಮೊಬೈಲ್ ಬಳಕೆ ನಿಲ್ಲಿಸಿದ್ದರು. ಎಲ್ಲರ ನಡುವೆ ಒಂದೇ ಒಂದು ಹ್ಯಾಂಡ್ ಸೆಟ್ ಬಳಕೆ ಮಾಡಿ ಹತ್ತಾರು ಸಿಮ್ ಬದಲಾವಣೆ ಮಾಡುತ್ತಿದ್ದರು. ಪದೇಪದೆ ಆಶ್ರಯ ತಾಣಗಳನ್ನು ಬದಲಾವಣೆ ಮಾಡಿ ಸಿಐಡಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದರು. ಒಂದು ಮಾಹಿತಿ ಪ್ರಕಾರ 12 ಲಾಡ್ಜ್ಗಳನ್ನು ಬದಲಾವಣೆ ಮಾಡಿದ್ದರಂತೆ. ಜತೆಗೆ ಯಾರನ್ನೂ ಸಂಪರ್ಕಿಸುತ್ತಿರಲಿಲ್ಲ.
ಆದರೆ, ಸಿಐಡಿ ಬಲೆಗೆ ಬಿದ್ದ ಜ್ಯೋತಿ ಪಾಟೀಲ್‌ನ ಒಂದೆರಡು ಬಾರಿ ಸಂಪರ್ಕಿಸಿದ್ದರು. ಇದೇ ಆರೋಪಿಗಳವರೆಗೆ ತಲುಪಲು ಸಿಐಡಿಗೆ ದಾರಿ ಮಾಡಿ ಕೊಟ್ಟಿತ್ತು. ಟವರ್ ಲೋಕೆಷನ್ ಆಧರಿಸಿ ಆರೋಪಿಗಳನ್ನು ತಲುಪಲು ಯಶಸ್ವಿಯಾಗಿದೆ ಸಿಐಡಿ ತಂಡ. ಜ್ಞಾನಜ್ಯೋತಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆದಿತ್ತು. ಇದೇ ಶಾಲೆಯ ಒಡತಿ, ಜಿಲ್ಲಾ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಶಾಲೆಯ ಹೊರಗಡೆ ನಿಂತು ಕಾವಲು ಕಾಯುತ್ತಿದ್ದಳು. ತಪಾಸಣೆಗೆ ಬರುವವರನ್ನು ತಡೆಯುವ ಕೆಲಸ ಮಾಡುತ್ತಿದ್ದಳು. ಒಳಗಡೆ ಅಕ್ರಮ ನಡೆಯುತ್ತಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.
ನಿನ್ನೆ ಬಂಧನಕ್ಕೊಳಗಾದ ಜ್ಯೋತಿ ಪಾಟೀಲ್ ನಗರಸಭೆಯಲ್ಲಿ ಎಸ್‌ಡಿಎ ಆಗಿದ್ದಾಳೆ. ಈ ಮುಂಚೆ ಬೆಂಗಳೂರು ವಿಧಾನಸೌದದ ಕಚೇರಿಯಲ್ಲಿ ಎಸ್‌ಡಿಎ ಆಗಿದ್ದ ಜ್ಯೋತಿ, ಕಲಬುರಗಿ ಮೂಲದವರು ಏನೇ ಕೆಲಸ ತೊಗೊಂಡು ಹೋದ್ರು ಮಾಡಿಸಿ ಕೊಡುತ್ತಿದ್ದಳು. ಎಲ್ಲಾ ಇಲಾಖೆಯಲ್ಲಿ ಪರಿಚಯಸ್ಥರಿದ್ದಾರೆ. ಸಚಿವರು ನಮ್ಮ ಸಂಬಂಧಿ ಆಗಬೇಕು ಎಂದು ಹೇಳಿಕೊಳ್ಳುತ್ತಿದ್ದಳಂತೆ.
ಸರ್ಕಾರಿ ಕೆಲಸದಲ್ಲಿದ್ದರು ಹಣ ಗಳಿಸುವ ದುರಾಸೆಗೆ ಬಿದ್ದು ಸೇಡಂ ಮೂಲದ ಪಿಎಸ್ಐ ಪರೀಕ್ಷಾರ್ಥಿ ಅಭ್ಯರ್ಥಿ ಶಾಂತಾಬಾಯಿ ಹಾಗೂ ಅಕ್ರಮದ ಕಿಂಗ್‌ಪಿನ್ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಳು. ಶಾಂತಾಬಾಯಿ ಕೇವಲ 13 ಉತ್ತರ ಟಿಕ್ ಮಾಡಿ ಬಂದಿದ್ದಳು. ನಂತರ ಮೇಲ್ವಿಚಾರಕಿಯರು ಉಳಿದ ಉತ್ತರ ಟಿಕ್ ಮಾಡಿದ್ದರು. ಅಕ್ರಮದಿಂದ 101 ಅಂಕ ಪಡೆದು ಶಾಂತಾಬಾಯಿ ಆಯ್ಕೆ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದಳು. ಓಎಂಆರ್ ಶೀಟ್ ಪರಿಶೀಲನೆ ವೇಳೆ ಸಂಗತಿ ಹೊರ ಬೀಳುತ್ತಿದ್ದಂತೆ ಶಾಂತಾಬಾಯಿ ತೆಲೆ ಮರೆಸಿಕೊಂಡಿದ್ದಳು. ಪುಣೆಯಲ್ಲಿ ದಿವ್ಯಾ ಜತೆ ಶಾಂತಾಬಾಯಿ ಕೂಡ ಅರೆಸ್ಟ್ ಆಗಿದ್ದಾಳೆ.
ಅಕ್ರಮ ಪ್ರಕರಣ ಬೆಳಕಿಗೆ ಬಂದ ನಂತರ ತೆಲೆ ಮರೆಸಿಕೊಂಡಿದ್ದ ದಿವ್ಯಾ& ಗ್ಯಾಂಗ್ ಬರೋಬ್ಬರಿ 18 ದಿನಗಳ ನಂತರ ಸಿಐಡಿ ಬಲೆಗೆ ಬಿದ್ದಿದ್ದಾರೆ. ಸದ್ಯ ದಿವ್ಯಾ ಹಾಗರಗಿಯನ್ನು ಪುಣೆಯಿಂದ ಕಲಬುರಗಿಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಲಾಗಿದೆ. ದಿವ್ಯಾ ಬಂಧನದಿಂದ ಹಲವರ ಎದೆ ಢವಢವ ಎನ್ನಲು ಆರಂಭಿಸಿದೆ. ದಿವ್ಯಾ ಯಾರ್ಯಾರ ಬಂಡವಾಳ ಬಿಚ್ಚಿಡಲಿದ್ದಾಳೆ ಎಂಬುದನ್ನ ಕಾಯ್ದು ನೋಡಬೇಕಿದೆ.
ಇದನ್ನೂ ಓದಿ: ತನಿಖೆ ಪೂರ್ಣಗೊಳ್ಳುವ ಮುನ್ನ ಸರ್ಕಾರ PSI ನೇಮಕ ರದ್ದು ನಿರ್ಧಾರ ಮಾಡಿದ್ದು ಸರಿಯಲ್ಲ: ಹೆಚ್‌ಡಿಕೆ