ಕಲಬುರಗಿ: ಗಣೇಶ ಅಂದ್ರೆ ವಿಘ್ನ ನಿವಾರಕ. ಗಜಾನನನ ಪ್ರತಿಷ್ಠಾಪನೆ ಮಾಡಿದ್ರೆ ಕೊರೊನಾ ತೊಲಗುತ್ತದೆ. ಆದ್ರೆ ಸರ್ಕಾರ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಮೀನಾಮೇಷ ಎಣಿಸುತ್ತಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯ ಸಂಗಮ ಕ್ಷೇತ್ರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸರ್ಕಾರ ಬಾರ್ ಹಾಗೂ ಮಾಲ್ಗಳಿಗೆ ಅನುಮತಿ ಕೊಟ್ಟಿದೆ. ಮಾರುಕಟ್ಟೆಗಳಲ್ಲಿ ಜನರಜಾತ್ರೆ ನೆರೆಯುತ್ತಿದೆ. ಅದನ್ನು ನಿಯಂತ್ರಿಸುವುದನ್ನು ಬಿಟ್ಟು ಗಣೇಶ ಪ್ರತಿಷ್ಠಾಪನೆ ಮೇಲೆ ನಿರ್ಬಂಧ ಹೇರುವುದು ಸರಿಯಲ್ಲ. ಅನುಮತಿ ನೀಡದಿದ್ದರೂ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡಿಯೇ ತೀರುತ್ತೇವೆ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.
ಬಾಬಾ ಬುಡನ್ ಗಿರಿ ವಿವಾದ ಮುಕ್ತಿಗಾಗಿ ಹೋಮ-ಹವನ
ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿ ವಿವಾದದಿಂದ ಮುಕ್ತಿ ಹೊಂದಬೇಕೆಂದು ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ಗಣ ಹೋಮ ಮತ್ತು ದತ್ತ ಹೋಮ ಹಾಗೂ ಕೋಟಿ ದತ್ತ ಜಪ ಯಜ್ಞ ಮಾಡಲಾಯಿತು. ವಿವಾದಿತ ಬಾಬಾ ಬುಡನ್ ಗಿರಿ ದತ್ತ ಪೀಠ ಹಿಂದೂಗಳ ಪಾಲಾಗಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ಮುತಾಲಿಕ್ ತಿಳಿಸಿದರು. ಕರುಣೇಶ್ವರ ಮಠದ ಸಿದ್ಧಲಿಂಗ ಮಹಾಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.