ಕಲಬುರಗಿ: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಆಪರೇಷನ್ ಕಮಲ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಗೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸುವ ಕುರಿತಾದ ವಿಚಾರಣೆಯನ್ನು ಜುಲೈ 1ಕ್ಕೆ ಕಲಬುರಗಿ ಹೈಕೋರ್ಟ್ ಮುಂದೂಡಿದೆ.
ಕಲಬುರಗಿ ಹೈಕೋರ್ಟ್ ನ್ಯಾಯಾಲಯದಲ್ಲಿ ಇಂದು ನಡೆದ ವಿಚಾರಣೆಯಲ್ಲಿ ಶಾಸಕ ನಾಗನಗೌಡ ಕಂದಕೂರ ಪುತ್ರ ಶರಣಗೌಡ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ವಾದ ಮಂಡಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ವಾದ ಮಂಡನೆ ಮಾಡಿದ ರವಿವರ್ಮ ಕುಮಾರ್, ಯಡಿಯೂರಪ್ಪ ಅವರು ಚುನಾವಣಾ ಖರ್ಚಿಗಾಗಿ ಹತ್ತು ಕೋಟಿ ರೂಪಾಯಿ ನೀಡುವುದಾಗಿ ಶರಣಗೌಡಗೆ ಆಮಿಷ ಒಡ್ಡಿದ್ದಾರೆ. ಆದರೆ, ವಿಧಾನಸಭೆ ಚುನಾವಣೆಗೆ 28 ಲಕ್ಷ ರೂಪಾಯಿ ಮಾತ್ರ ಖರ್ಚು ಮಾಡಲು ಅವಕಾಶವಿದೆ. ಆದರೆ, ಆಮಿಷ ಒಡ್ಡಿರುವುದು ಹತ್ತು ಕೋಟಿ ರೂಪಾಯಿ. ಚುನಾವಣಾ ಖರ್ಚನ್ನು ಹೊರತುಪಡಿಸಿ ಉಳಿದದ್ದನ್ನು ಆಮಿಷವೆಂದು ಪರಿಗಣಿಸುವಂತೆ ವಾದ ಮಂಡಿಸಿದರು.
ಇದೇ ವೇಳೆ ತಡೆಯಾಜ್ಞೆ ತೆರವುಗೊಳಿಸುವ ಮೂಲಕ ಪೊಲೀಸರ ತನಿಖೆಗೆ ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿದರು. ವಾದ ಪ್ರತಿವಾದವನ್ನು ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಅಶೋಕ್ ವಿಚಾರಣೆಯನ್ನು ಜುಲೈ 1ಕ್ಕೆ ಮುಂದೂಡಿದ್ದಾರೆ.