ಕಲಬುರಗಿ: ಬಿಟ್ ಕಾಯಿನ್ ಪ್ರಕರಣ ಮುಖ್ಯಮಂತ್ರಿ ಅವರನ್ನ ಬಲಿ ಪಡೆಯುತ್ತದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿಯೂ ಸಹ ಬಿಜೆಪಿಯಲ್ಲಿ ಮೂರು ಜನ ಸಿಎಂ ಆಗುತ್ತಾರೆ. ಬಿಜೆಪಿಯ ರಾಜಕಾರಣಿಗಳು ಬಿಟ್ ಕಾಯಿನ್ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಬೇರೆ ಪಕ್ಷದವರು ಭಾಗಿಯಾಗಿದ್ದರೆ ತನಿಖೆ ಮಾಡಲಿ ಗೊತ್ತಾಗುತ್ತದೆ. ಕೇವಲ ಬಾಯಿ ಮಾತಲ್ಲೇ ತನಿಖೆಗೆ ಆದೇಶ ಮಾಡಿದ್ದೇವೆ ಎಂದು ಹೇಳುತ್ತಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ:
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕಲಬುರಗಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಇತ್ತೀಚೆಗೆ ನಗರದಲ್ಲಿ ಹೆಚ್ಚಾಗುತ್ತಿರುವ ಕ್ರೈಂ ಪ್ರಕರಣಗಳ ಕುರಿತು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿಯಲ್ಲಿ ಸಿಟಿ ಪೊಲೀಸ್ ಕಮಿಷನರೆಟ್ ಆಗಬೇಕು ಎಂದು ಬಯಸಿದ್ದೆವು. ಆ ಬೇಡಿಕೆಯನ್ನ ಕಾಂಗ್ರೆಸ್ ಸರ್ಕಾರವಿದ್ದಾಗ ಈಡೇರಿಸಿತ್ತು. ಹೆಚ್ಚಿನ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ನೇಮಕವಾಗುತ್ತಾರೆ ಎಂದು ನಿರೀಕ್ಷೆಯಿಟ್ಟಿದ್ದೆವು. ಆದರೆ ಬಿಜೆಪಿ ಸರ್ಕಾರ ಬಂದಾಗಿನಿಂದ ಇಲ್ಲಿನ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇಲ್ಲಿ ಹೇಳುವವರು, ಕೇಳುವವರು ಯಾರು ಇಲ್ಲದಂತಾಗಿದೆ ಎಂದರು.
ಈ ಹಿಂದೆ ಔಟ್ ಲುಕ್ ಮ್ಯಾಗ್‌ಜಿನ್‌ನಲ್ಲಿ ಕಲಬುರಗಿ ವೇಗವಾಗಿ ಬೆಳೆಯುತ್ತಿರುವ ನಗರ (Fastest Growing City) ಎಂದು ಬಿಂಬಿಸಿತ್ತು. ಆದರೆ ಇದೀಗ ಕಲಬುರಗಿ ನಗರ ಗಾಂಜಾ ನಗರಿ, ನಶೆ ನಗರಿ ಎಂದು ಕೆಟ್ಟ ಹೆಸರು ಪಡೆದುಕೊಳ್ಳುತ್ತಿದೆ ಎಂದು ಖರ್ಗೆ ಕಿಡಿಕಾರಿದರು.
ಹೋಂ ಅಲ್ಲ, ವಸೂಲಿ ಡಿಪಾರ್ಟ್ಮೆಂಟ್:
ಹೋಂ ಡಿಪಾರ್ಟ್ಮೆಂಟ್ ಹೆಸರು ತೆಗೆದು, ವಸೂಲಿ ಡಿಪಾರ್ಟ್ಮೆಂಟ್ ಎಂದು ಇಟ್ಟುಕೊಳ್ಳಲಿ. ಇಲ್ಲಿ ರಕ್ಷಕರೇ ಭಕ್ಷಕರಾದ್ದಾರೆ. ಪೊಲೀಸ್ ಇಲಾಖೆಗೆ ಸರ್ಕಾರದ ಭಯವಿಲ್ಲ. ಇಲ್ಲಿ ಪೊಲೀಸ್ ಕಾನ್ಸ್ಟೇಬಲ್ ಯಿಂದ ಹಿಡಿದು ಡಿಸಿ ಹುದ್ದೆವರೆಗೆ ಬರುವವರು ರೆಟ್ ಫಿಕ್ಸ್ ಆಗಿಯೇ ಬರ್ತಾರೆ ಎಂದು ದೂರಿದರು.
ಬಿಜೆಪಿ ಪೊಲೀಸ್ ಇಲಾಖೆ ಕಾಮಧೇನು:
ಚಿತ್ತಾಪುರದಲ್ಲಿ ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು ಬಂದು ಸಂಬಳ ಪಡೆದಿದ್ದಾರೆ. ಬಿಜೆಪಿ ಸರ್ಕಾರ ಪೊಲೀಸ್ ಇಲಾಖೆ ಕಾಮಧೇನು ಆಗಿದೆ. ದುಡ್ಡು ಕಟ್ಟಿ ಅಧಿಕಾರಿಗಳು ಬರುತ್ತಿದ್ದಾರೆ. ಅದನ್ನ ವಾಪಸ್ ಪಡೆಯಲು ಅಧಿಕಾರಿಗಳು ಸಾರ್ವಜನಿಕರಲ್ಲಿ ವಸೂಲಿ ಮಾಡುತ್ತಿದ್ದಾರೆ. ಪ್ರತಿ ಠಾಣೆಗೆ 50 ಕೇಸ್ ಹಾಕಲು ಟಾರ್ಗೆಟ್ ನೀಡಲಾಗಿದೆ.
ಕಡಿಮೆ ಕೇಸ್ ಹಾಕಿದರೆ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗೆ ಪ್ರಶ್ನಿಸುತ್ತಿದ್ದಾರೆ. ಎಲ್ಲಾ ದಾಖಲೆಗಳು ಸರಿ ಇದ್ದರೂ ವಾಹನ ಸವಾರರಿಗೆ ದುಪ್ಟಟ್ಟು ದಂಡ ಹಾಕುತ್ತಿದ್ದಾರೆ. ಕಲಬುರಗಿಯಲ್ಲಿ ಪೊಲೀಸರಿಗೆ ಹಫ್ತಾ ಕೊಡಲು ಜೇಬಿನಲ್ಲಿ 500 ರೂ. ಇಟ್ಟುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಖರ್ಗೆ ಆರೋಪಿಸಿದ್ದಾರೆ.
ನಗರದಲ್ಲಿ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳು ಹೆಚ್ಚುತ್ತಿವೆ. ಸರ್ಕಾರ ಕೆಲಸ ಕೆಲಸ ನೀಡುವುದನ್ನು ಬಿಟ್ಟು ಡ್ರಗ್ಸ್ ಕೊಡುತ್ತಿದೆ. ಕಲಬುರಗಿಯಲ್ಲಿ ಯುವಕರಿಗೆ ಸುಲಭವಾಗಿ ಗಾಂಜಾ, ಡ್ರಗ್ಸ್ ಸಿಗುತ್ತಿದೆ. ಕಲಬುರಗಿಯಲ್ಲಿ ರೇಡ್ ಮಾಡಲು ಬೆಳಗಾವಿ, ಬೆಂಗಳೂರು, ಮಹಾರಾಷ್ಟ್ರದಿಂದ ಅಧಿಕಾರಿಗಳು ಬರುತ್ತಿದ್ದಾರೆ. ಆದರೆ ಸ್ಥಳೀಯ ಪೊಲೀಸರು ಏನ್ ಮಾಡುತ್ತಿದ್ದಾರೆ? ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಪೊಲೀಸರಿಂದಲೇ ವಸೂಲಿ ದಂಧೆ:
ಕಲಬುರಗಿಯಲ್ಲಿ ಕ್ರೈಂ ನಿಯಂತ್ರಣ ಮಾಡಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ನಗರದ 121 ವೈನ್ ಶಾಪ್‌ಗಳಿಂದ ಪ್ರತಿ ತಿಂಗಳು 5 ಸಾವಿರ ರೂ. ವಸೂಲಿ ಮಾಡಲಾಗ್ತಿದೆ. ಕಲಬುರಗಿಯಲ್ಲಿ ಅಕ್ರಮ ಅಕ್ಕಿ ಸಾಗಣೆ 45 ಲಾರಿಗಳು ಪೊಲೀಸರದ್ದೇ ಆಗಿವೆ. ನಗರ ಪೊಲೀಸರಿಗೆ ಅಕ್ರಮ ಅಕ್ಕಿ ಸಾಗಿಸುವವರೇ ಸಂಬಳ ಕೊಡುತ್ತಾರೆಂಬ ಅನುಮಾನ ಮೂಡುತ್ತಿದೆ ಎಂದು ಖರ್ಗೆ ಶಂಕೆ ವ್ಯಕ್ತಪಡಿಸಿದರು.
ರೌಡಿ ಶೀಟರ್‌ಗಳು ಉನ್ನತ ಪೊಲೀಸ್ ಅಧಿಕಾರಿಗಳ ಜತೆ ಫೋಟೊ ತೆಗೆಸಿಕೊಳ್ಳುತ್ತಾರೆ. ಅವರು ಆ ಫೋಟೋವನ್ನ ರಾಜರೋಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾರೆ. ಲಾಡ್ಜ್‌ಗಳನ್ನ ಸೆಟಲ್‌ಮೆಂಟ್ ಕೇಂದ್ರಗಳನ್ನಾಗಿ ಮಾಡಿಕೊಂಡಿದ್ದಾರೆ. ಬೆಕ್ಕು ಕಣ್ಮುಚ್ಚಿ ಹಾಲು ಕುಡಿದ್ರೆ ಗೊತ್ತಾಗಲ್ಲ ಎಂದು ಪೊಲೀಸ್ ಇಲಾಖೆಯವರು ತಿಳಿದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಇದ್ದು, ಇಲ್ಲದಂತಾಗಿದೆ:
ಕೊಲೆ ಮಾಡುವ ಮೊದಲು ಯಾವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾಡಬೇಕು ಎಂದು ಮೊದಲೆ ಪ್ಲಾನ್ ಮಾಡಲಾಗುತ್ತದೆ. ಯಾವ ಠಾಣೆ ವ್ಯಾಪ್ತಿಯಲ್ಲಿ ಮರ್ಡರ್ ಮಾಡಿದರೆ ಬೇಗ ಬೇಲ್ ಸಿಗುತ್ತದೆ ಎಂದು ನಿರ್ಧರಿಸಿಕೊಂಡು ಕೊಲೆ ಮಾಡುತ್ತಾರೆ. ಹಾಡಹಗಲೇ ಕೇಂದ್ರ ಬಸ್ ನಿಲ್ದಾಣದಲ್ಲಿ ಕೊಲೆ ಮಾಡ್ತಾರೆ ಅಂದ್ರೆ ಏನರ್ಥ.? ನಮಗೆ ಶಿಕ್ಷೆ ಆಗುವುದಿಲ್ಲ ಎಂದು ಆರೋಪಿಗಳಿಗೆ ಖಚಿತವಾಗಿದೆ. ಕಸ್ತೂರಿ ಲಾಡ್ಜ್‌ನಲ್ಲಿ ಆಗುವ ಸೆಟಲ್‌ಮೆಂಟ್‌ಗಳ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗುವುದಿಲ್ಲ. ಒಟ್ಟಿನಲ್ಲಿ ಕಲಬುರಗಿ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಇದ್ದೂ, ಇಲ್ಲದಂತಾಗಿದೆ. ಸಚಿವರು ಕೇವಲ ಧ್ವಜಾರೋಹಣ ಮಾಡಲು ಬರುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.