ಸೇಡಂ: ಜೂನ್12ರ ಒಳಗಾಗಿ ಕಾರ್ಮಿಕರ ವೇತನ ನೀಡುವುದಾಗಿ ವಾಸವ ದತ್ತಾ ಸಿಮೆಂಟ್ ಕಾರ್ಖಾನೆ ಆಡಳಿತ ಮಂಡಳಿ ಭರವಸೆ ನೀಡಿದೆ ಎಂದು ಭಾರತೀಯ ಮಜ್ದೂರ ಸಂಘದ ಅಧ್ಯಕ್ಷ ಅನೀಲಕುಮಾರ ಪಾಟೀಲ ತೇಲ್ಕೂರ ತಿಳಿಸಿದ್ದಾರೆ.
ಸರ್ಕಾರದ ನಿರ್ದೇಶನವನ್ನೂ ಮೀರಿ ಗುತ್ತಿಗೆ ಕಾರ್ಮಿಕರು ಮತ್ತು ದಿನಗೂಲಿ ನೌಕರರಿಗೆ ಎರಡು ತಿಂಗಳ ವೇತನ ನೀಡದೇ ಇರುವುದನ್ನು ಖಂಡಿಸಿ ರೊಚ್ಚಿಗೆದ್ದ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ನಂತರ ಕಾರ್ಮಿಕ ಮುಖಂಡ ಅನೀಲಕುಮಾರ ಪಾಟೀಲ ತೇಲ್ಕೂರ ನೇತೃತ್ವದಲ್ಲಿ ಸಿಮೆಂಟ್ ಕಾರ್ಖಾನೆ ಅಧಿಕಾರಿಗಳು, ಪೊಲೀಸರು ಮತ್ತು ಇನ್ನುಳಿದ ಕಾರ್ಮಿಕ ಮುಖಂಡರ ಸಮ್ಮುಖದಲ್ಲಿ ಸಭೆ ನಡೆದಿತ್ತು.
ಈ ಕುರಿತು ಸ್ಪಷ್ಟನೆ ನೀಡಿರುವ ಅನೀಲಕುಮಾರ ಪಾಟೀಲ ತೇಲ್ಕೂರ, ಜೂನ್ 12ರೊಳಗೆ ಕಾರ್ಖಾನೆ ಆಡಳಿತ ಮಂಡಳಿ ಗುತ್ತಿಗೆ ಕಾರ್ಮಿಕರು ಮತ್ತು ದಿನಗೂಲಿ ನೌಕರರ ವೇತನ ಪಾವತಿಸುವ ಸಂಬಂಧ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಗಿದೆ. ಬರುವ ದಿನಗಳಲ್ಲಿ ವೇತನ ಪಾವತಿ ಮಾಡದೇ ಇದ್ದ ಪಕ್ಷದಲ್ಲಿ ಕಾನೂನು ಕೈಗೆತ್ತಿಕೊಂಡಾದರೂ ಸರಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಹೇಳಿದರು.
ಕಾರ್ಖಾನೆಯ ಆಡಳಿತ ಮಂಡಳಿಯ ದುರಾಡಳಿತದಿಂದ ಕೊರೊನಾ ಸಮಯದಲ್ಲಿ ಕಾರ್ಮಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಸ್ಥಳೀಯವಾಗಿದ್ದರೂ ಸಹ ಯಾರೊಬ್ಬರಿಗೂ ಕಾರ್ಖಾನೆ ಸಹಾಯ ಮಾಡಿಲ್ಲ. ಕಾರ್ಮಿಕರನ್ನು ಕೀಳಾಗಿ ಕಾಣುವ ಮೂಲಕ ದೌರ್ಜನ್ಯ ನಡೆಸಿದೆ ಎಂದು ಆರೋಪಿಸಿದರು.