ಕಲಬುರಗಿ : ನಗ್ನಗೊಳಿಸಿ ಕೊಲೆಗೈದು ಬಳಿಕ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಲ್ಯಾಬ್ ಟೆಕ್ನಿಶಿಯನ್ ಸಿದ್ದಪ್ಪ ಕೊಲೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ್ಧಾರೆ.
ಖಾಸಗಿ ಶಾಲೆಯೊಂದರಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದ ಸಿದ್ದಪ್ಪ(35) ಅವರ ಶವ ಇತ್ತೀಚೆಗೆ ಕಮಲಾಪುರ ತಾಲೂಕಿನ ಬೆಳಕೋಟ ಗ್ರಾಮದ ಜಮೀನೊಂದರಲ್ಲಿ ಪತ್ತೆಯಾಗಿತ್ತು.
ನಗ್ನವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಶವದ ಮೇಲೆ ಹಲ್ಲೆ ಮಾಡಿದ ಗುರುತುಗಳು ಪತ್ತೆಯಾಗಿದ್ದವು. ಪ್ರಕರಣ ಭೇದಿಸಿದ ಪೊಲೀಸರು, ಅನೈತಿಕ ಸಂಬಂಧದ ಹಿನ್ನೆಲೆ ಕೊಲೆ ನಡೆದಿದೆ ಎಂಬ ವಿಚಾರವನ್ನು ಬಯಲಿಗೆಳೆದಿದ್ದಾರೆ.
ಹತ್ಯೆಯಾದ ಲ್ಯಾಬ್ ಟೆಕ್ನಿಶಿಯನ್ ಸಿದ್ದಪ್ಪ, ಬೇಳಕೋಟ ಗ್ರಾಮದ ಅನುಸೂಯ ಎಂಬ ವಿಧವೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನಂತೆ. ಅಲ್ಲದೇ ಮೇಲಿಂದ ಮೇಲೆ ಲೈಂಗಿಕ ಕಿರುಕುಳ ನೀಡುವುದರ ಜತೆಗೆ ಅನುಸೂಯಾ ಮಗಳ ಮೇಲೂ ಕಣ್ಣು ಹಾಕಿದ್ದನಂತೆ.
ಹೀಗಾಗಿ, ಮುಂದೆ ತನ್ನ ಮಗಳಿಗೂ ಇದೇ ಪರಿಸ್ಥಿತಿ ಬರಬಾರದು ಅಂತಾ ಗೋವಿಂದ ಮತ್ತು ಶಿವಕುಮಾರ್ ಎಂಬಾತರಿಗೆ ಕೊಲೆಗೆ ಸಹಕಾರ ನೀಡುವಂತೆ ಮತ್ತು ಸಹಕಾರ ನೀಡಿದ್ರೆ 50 ಸಾವಿರ ರೂ.ಹಣ ನೀಡುವುದಾಗಿ ಮಹಿಳೆ ಹೇಳಿದ್ದಾಳೆ.
ಅದರಂತೆ ಅನುಸೂಯ ಮಾತಿಗೆ ಒಪ್ಪಿಕೊಂಡು ಮೂವರು, ಸಿದ್ದಪ್ಪನನ್ನ ಫೋನ್ ಮಾಡಿ ಕರೆಯಿಸಿಕೋ.. ನಾವು ಅಲ್ಲಿಗೆ ಬಂದು ಮುಗಿಸಿ ಬಿಡ್ತೀವಿ ಎಂದು ಡೀಲ್ ಕುದುರಿಸಿದ್ದಾರೆ. ಕೊಲೆಯ ಪ್ಲಾನ್ ಗೊತ್ತಿಲ್ಲದ ಸಿದ್ದಪ್ಪ, ಅನುಸೂಯಾ ಕರೆದೆಡೆ ಬಂದು ಆಕೆಯ ಜತೆ ತೊಗರಿ ಹೊಲದಲ್ಲಿ ಪಲ್ಲಂಗದಾಟದಲ್ಲಿ ತೊಡಗಿದ್ದಾನೆ.
ಆಗ ಶಿವಕುಮಾರ್ ಮತ್ತು ಗೋವಿಂದ್ ಸೇರಿಕೊಂಡು ಚಾಕುವಿನಿಂದ ಇರಿದು, ಬಳಿಕ ಬಡಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಸಿದ್ದಪ್ಪನ ಮೃತ ದೇಹವನ್ನ ತೊಗರಿಯ ಹೊಲದ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ನೇತು ಹಾಕಿ ಪರಾರಿಯಾಗಿದ್ದರು ಎಂಬ ವಿಚಾರ ತನಿಖೆಯಿಂದ ಬಯಲಾಗಿದೆ. ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಇಶಾ ಪಂತ್ ತಿಳಿಸಿದ್ದಾರೆ.
ಇದನ್ನೂ ಓದಿ: ಹೆಂಡತಿ ಚುಡಾಯಿಸಿದ ಆರೋಪ.. ಬೆಂಗಳೂರಲ್ಲಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ದೂರು ಪ್ರತಿದೂರು