ಕಲಬುರಗಿ: ಹಳಿ ದಾಟುವಾಗ ರೈಲಿಗೆ ಸಿಲುಕಿ ಯುವಕನ ಕಾಲು ತುಂಡಾದ ಘಟನೆ ಚಿತ್ತಾಪುರ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ಚಿತ್ತಾಪುರ ತಾಂಡಾದ ನಿವಾಸಿಯಾದ ಏಕನಾಥ ತಾಂಡಾದಿಂದ ಚಿತ್ತಾಪೂರ ಪಟ್ಟಣಕ್ಕೆ ಹಳಿ ದಾಟಿಕೊಂಡು ತೆರಳುವಾಗ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಯುವಕನನ್ನು ನಗರದ ಕಾಮರೆಡ್ಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಂಡಾದಿಂದ ಪಟ್ಟಣಕ್ಕೆ ಬರಲು ಮೇಲ್ಸೆತುವೆಯ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ತಾಂಡಾ ನಿವಾಸಿಗಳು ಹಳಿ ದಾಟಿಕೊಂಡೆ ಪಟ್ಟಣ ಸೇರುತ್ತಿದ್ದಾರೆ. ಇತ್ತಿಚಿಗೆ ಹಳಿ ದಾಟುವಾಗ ವೃದ್ದೆಯೊಬ್ಬಳು ರೈಲಿನಡಿ ಸಿಲುಕಿ ರೈಲ್ವೆ ಕೆಳಗಡೆ ಮಲಗಿ ಪ್ರಾಣ ರಕ್ಷಿಸಿಕೊಂಡಿದ್ದಳು. ಇದೀಗ ಯುವಕನ ಕಾಲು ಕಟ್ ಆಗಿದೆ. ಈ ನಡುವೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದ್ದು, ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.