ಕಲಬುರಗಿ: ಕೊರೊನಾ ಅಟ್ಟಹಾಸ ಕಡಿಮೆ ಆಗಿದೆ ಅಂತ ನಿಟ್ಟುಸಿರು ಬಿಡುವಷ್ಟರಲ್ಲಿಯೇ ಜ್ವರದಿಂದ ಬಳಲಿ ಒಂದೇ ಗ್ರಾಮದ ಮೂವರು ಬಾಲಕಿಯರು ಸಾವನ್ನಪ್ಪಿರುವುದು ಜಿಲ್ಲೆಯ ಜನರಲ್ಲಿ ಆತಂಕ ಹುಟ್ಟಿಸಿದೆ.
ಅಫಜಲಪುರ ತಾಲೂಕಿನ ಆನೂರ ಗ್ರಾಮದಲ್ಲಿ 15 ದಿನಗಳ ಅಂತರದಲ್ಲಿ ಮೂರು ಜನ ಬಾಲಕಿಯರು ಜ್ವರದಿಂದ ಬಳಲಿ ಸಾವನ್ನಪ್ಪಿದ್ದಾರೆ. ಇನ್ನು ಆನೂರ ಗ್ರಾಮದ ಹಲವು ಬಾಲಕ, ಬಾಲಕಿಯರು ಜ್ವರದಿಂದ ಬಳಲುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮೇಲ್ನೋಟಕ್ಕೆ ಕಲುಷಿತ ಕುಡಿಯುವ ನೀರು ಸೇವನೆ ಮಾಡಿ ಅನಾರೋಗ್ಯಕ್ಕೆ ಒಳಗಾದಂತೆ ಕಂಡುಬರುತ್ತಿದೆ. ಆನೂರು ಗ್ರಾಮಕ್ಕೆ ಕಲುಷಿತ ಕುಡಿಯುವ ನೀರು ಪೂರೈಕಯಿಂದಲೇ ಮಕ್ಕಳು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ತಾಲೂಕಾಡಳಿ ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.