ಕಲಬುರಗಿ: ಹೈದರಾಬಾದ್ ನ ಪಶು ವೈದ್ಯೆ ಮೇಲಿನ ಅತ್ಯಾಚಾರ ಆರೋಪಿಗಳನ್ನು ಪೊಲೀಸರು ಎನ್ಕೌಂಟರ್ ಮಾಡಿರುವುದನ್ನು ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಕೆ.ನೀಲಾ ಖಂಡಿಸಿದ್ದಾರೆ.
ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಸರ್ವಾಧಿಕಾರ ಅಲ್ಲ: ಕೆ.ನೀಲಾ ಈಟಿವಿ ಭಾರತನೊಂದಿಗೆ ಮಾತನಾಡಿರುವ ಅವರು, ಅತ್ಯಾಚಾರಿಗಳ ಎನ್ಕೌಂಟರ್ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರು ಭ್ರಮೆ ಹುಟ್ಟಿಸುವಂತಹ ಕೆಲಸ ಮಾಡುತ್ತಿದ್ದಾರೆ. ಎನ್ಕೌಂಟರ್ ಮಾಡಿರೋದು ಅತ್ಯಾಚಾರಕ್ಕಾಗಿ ಅಲ್ಲ, ಆತ್ಮರಕ್ಷಣೆಗಾಗಿ ಅಂತಾ ಹೇಳ್ತಿದಾರೆ. ಆದ್ರೆ ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆಯೇ ಹೊರತು ಸರ್ವಾಧಿಕಾರಿ ನೀತಿ ಇಲ್ಲ. ಈ ರೀತಿ ಮಾಡುವುದರಿಂದ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಿಲ್ಲ ಎಂದರು. ಇನ್ನು, ದೇಶದಲ್ಲಿ ನಡೆದಿರುವ ಬೇರೆ ಅತ್ಯಾಚಾರ ಪ್ರಕರಣಗಳಲ್ಲಿಯೂ ಪೊಲೀಸರು ಇದೇ ರೀತಿ ಎನ್ಕೌಂಟರ್ ಮಾಡುತ್ತಾರೆಯೇ ಎಂದು ನೀಲಾ ಪ್ರಶ್ನಿಸಿದರು. ಎನ್ ಕೌಂಟರ್ ಮೂಲಕ ಅತ್ಯಾಚಾರ ನಿಲ್ಲಿಸುವ ಭ್ರಮೆ ಸೃಷ್ಟಿಸಬೇಡಿ. ದೇಶದಲ್ಲಿ ತ್ವರಿತ ಗತಿಯ ಕಾನೂನು ಜಾರಿಯಾಗಲಿ ಎಂದು ಅವರು ಆಗ್ರಹಿಸಿದರು.