ಕಲಬುರಗಿ: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಜಾನುವಾರಗಳನ್ನು ರಕ್ಷಿಸುವಲ್ಲಿ ಚಿತ್ತಾಪುರ ಹಾಗೂ ವಾಡಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಕ್ರಮ ಜಾನುವಾರು ಸಾಗಾಣಿಕೆಗೆ ಕಡಿವಾಣ ಹಾಕಲು ಮುಂದಾಗಿರುವ ಪೊಲೀಸರು, ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಚಿತ್ತಾಪುರ ಹಾಗೂ ವಾಡಿ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕೊಂಡೊಯ್ಯುತ್ತಿದ್ದ ಜಾನುವಾರುಗಳನ್ನು ರಕ್ಷಿಸಿ ಗೋ ಶಾಲೆಗಳಲ್ಲಿ ಆಶ್ರಯ ಕಲ್ಪಿಸಿದ್ದಾರೆ.
ಲಾಡ್ಲಾಪುರದಿಂದ ವಾಡಿಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನ ಮತ್ತು ಬಸವಕಲ್ಯಾಣದಿಂದ ಯಾದಗಿರಿಗೆ ಸಾಗಿಸುತ್ತಿದ್ ಎರಡು ವಾಹನ ವಶಪಡಿಸಿಕೊಳ್ಳಲಾಗಿದೆ.
ಅಲ್ಲದೆ ಚಿತ್ತಾಪುರ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವನ್ನು ಜಪ್ತಿ ಮಾಡಲಾಗಿದೆ. ಮೂರು ವಾಹನಗಳ ಜೊತೆ ಮೂವರು ಆರೋಪಿಗಳನ್ನೂ ವಶಕ್ಕೆ ಪಡೆದಿರುವುದಾಗಿ ಚಿತ್ತಾಪುರ ಸಿಪಿಐ ಕೃಷ್ಣಪ್ಪ ಕಲ್ಲದೇವರು ತಿಳಿಸಿದ್ದು, 31 ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೆ ಆಳಂದ ಚೆಕ್ ಪೋಸ್ಟ್ ಬಳಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಎಂಟು ಒಂಟೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಬಕ್ರೀದ್ ಹಬ್ಬದ ವೇಳೆ ಬಲಿ ಕೊಡಲೆಂದು ರಾಜಾಸ್ತಾನದಿಂದ ಕಲಬುರಗಿಗೆ ಒಂಟೆಗಳನ್ನು ಕರೆತರಲಾಗುತ್ತಿತ್ತು. ಈ ಘಟನೆ ಬೆನ್ನಲ್ಲೇ ಚಿತ್ತಾಪುರ ತಾಲೂಕಿನಲ್ಲಿ ಗೋವು ಸಾಗಟ ಪ್ರಕರಣ ಬೆಳಕಿಗೆ ಬಂದಿದೆ.
ಸದ್ಯ ರಕ್ಷಿಸಲ್ಪಟ್ಟ ಜಾನುವಾರುಗಳನ್ನ ಭೋಸಗಾ ಬಳಿಯ ನಂದಿ ಅನಿಮಲ್ ವೆಲ್ಫೇರ್ ಸೊಸೈಟಿಯ ಗೋಶಾಲೆ ಹಾಗೂ ಚಿತ್ತಾಪುರ ತಾಲೂಕಿನ ಕೊಂಚೂರ್ ಗ್ರಾಮದ ಪುಣ್ಯಕೋಟಿ ಗೋಶಾಲೆಯಲ್ಲಿ ಆಶ್ರಯ ನೀಡಲಾಗಿದೆ. ಈ ಕುರಿತು ಚಿತ್ತಾಪುರ ಹಾಗೂ ವಾಡಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.