ಕಲಬುರಗಿ : ತೊಗರಿ ನಾಡಿನಲ್ಲಿ ಈ ವರ್ಷವೂ ವರುಣನ ಅಬ್ಬರ ಜೋರಾಗಿದ್ದು, ಎರಡಬಿಡದೆ ಆರ್ಭಟಿಸುತ್ತಿರುವ ಮೇಘರಾಜನ ಆಟಕ್ಕೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿ ಜನ ಹೈರಾಣಾಗಿದ್ದಾರೆ. ಹಳ್ಳ-ಕೊಳ್ಳಗಳು ಉಕ್ಕಿ ಹರಿಯತ್ತಿದ್ದು, ನೀರಿನ ರಭಸಕ್ಕೆ ಅಫಜಲಪುರ ತಾಲೂಕಿನ ಹಾವನೂರ ಗ್ರಾಮದ ಸಂಪರ್ಕ ಸೇತುವೆ ಕೊಚ್ಚಿಹೋಗಿ, ಶಾಲಾ- ಕಾಲೇಜು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಮಸ್ಯೆ ಎದುರಾಗಿದೆ.
ನೀರಿನ ರಭಸಕ್ಕೆ ಸೇತುವೆ ತಡೆಗೋಡೆಗಳು ಛಿದ್ರವಾಗಿ ಬಿದ್ದಿವೆ. ಸೇತುವೆ ಒಡೆದಿರೋದ್ರಿಂದ ಸಂಪರ್ಕ ಕಡಿತವಾಗಿ ಗ್ರಾಮಸ್ಥರು ಪರದಾಡುವಂತಾಗಿದೆ. ಊರಿಗೆ ಬರುತ್ತಿದ್ದ ಸಾರಿಗೆ ಬಸ್ ಸಂಚಾರವೂ ಸ್ಥಗಿತವಾಗಿದೆ. ಇದರಿಂದ ಕಲಬುರಗಿ ನಗರದ ಸೇರಿ ಬೇರೆ ಬೇರೆ ಕಡೆಗಳಲ್ಲಿ ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಾರು ಮೂರು ಕಿ.ಮೀ ದೂರದ ಮುಖ್ಯರಸ್ತೆಗೆ ನಡೆದುಕೊಂಡು ಹೋಗುವಂತಾಗಿದ್ದು, ವಿದ್ಯಾರ್ಥಿಗಳ ಶಿಕ್ಷಣಕ್ಕೂ ಹಿನ್ನಡೆಯಾಗುತ್ತಿದೆ.
ಶಾಸಕರಿಂದ ಕೇವಲ ಭರವಸೆ ಮಾತು: ಕಳೆದ ವರ್ಷ ಸುರಿದಿದ್ದ ಧಾರಾಕಾರ ಮಳೆಗೆ ಸೇತುವೆ ಶಿಥಿಲಗೊಂಡಿತ್ತು. ಆದರೆ ಕಳೆದ 20 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಹಳ್ಳ ತುಂಬಿ ಹರಿದು ಭಾಗಶಃ ಸೇತುವೆ ಕೊಚ್ಚಿಕೊಂಡು ಹೋಗಿದೆ. ದ್ವಿಚಕ್ರ ಸವಾರರು ಅಪಾಯದ ನಡುವೆಯೇ ಭಯದಲ್ಲಿ ಡ್ಯಾಮೇಜ್ ಸೇತುವೆ ದಾಟಿ ಸಂಚಾರ ಮಾಡುತ್ತಿದ್ದಾರೆ. ಕೊಂಚ ಯಾಮಾರಿದರೂ ಅಪಾಯ ಖಂಡಿತ.
ಆದರೂ ಅನಿವಾರ್ಯವಾಗಿ ಗ್ರಾಮಸ್ಥರು, ವಿದ್ಯಾರ್ಥಿಗಳು ಅಪಾಯವನ್ನು ಲೆಕ್ಕಿಸದೇ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಅದರಲ್ಲೂ ಸಾರಿಗೆ ಬಸ್ ಸಂಚಾರ ಸ್ಥಗಿತದಿಂದ ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಸೇತುವೆ ಹಾಳಾಗಿರುವ ಬಗ್ಗೆ ಶಾಸಕ ಎಂ.ವೈ. ಪಾಟೀಲ್, ಹತ್ತಾರು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಕೇವಲ ಸುಳ್ಳು ಭರವಸೆಗಳೇ ಸಿಗುತ್ತಿವೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಸೇತುವೆ ಮುರಿದು ಸಂಚಾರದ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಶಾಸಕರು ಗಂಭೀರವಾಗಿ ತೆಗೆದುಕೊಂಡು ಸೇತುವೆ ರಿಪೇರಿ ಅಥವಾ ಹೊಸದಾಗಿ ನಿರ್ಮಾಣ ಮಾಡಿಸಿಕೊಡುವಂತೆ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ. ಈ ಜನರ ಸಮಸ್ಯೆಗೆ ಶಾಸಕರು ಸ್ಪಂದಿಸಬೇಕಿದೆ.
ಇದನ್ನೂ ಓದಿ : ಕೊಡಗಿನಲ್ಲಿ ಧಾರಾಕಾರ ಮಳೆ: ಬೆಟ್ಟ ಕುಸಿತ, ರಸ್ತೆಗಳಲ್ಲಿ ಬಿರುಕು