ಕಲಬುರಗಿ: ಮದುವೆ ಸಮಾರಂಭದಲ್ಲಿ ಪಟಾಕಿ ಸಿಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ದಲಿತ ಹಾಗೂ ಸವರ್ಣೀಯರ ನಡುವೆ ಘರ್ಷಣೆ ಉಂಟಾಗಿದ್ದು, 10 ಜನ ಗಾಯಗೊಂಡ ಘಟನೆ ಯಡ್ರಾಮಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಭಾನುವಾರ ಈ ಘಟನೆ ನಡೆದಿದೆ. ದಲಿತ ಸಮುದಾಯದ ಯುವಕನ ಮದುವೆ ಸಮಾರಂಭದಲ್ಲಿ ಪಟಾಕಿ ಸಿಡಿಸುವ ಸಂಬಂಧ ಗಲಾಟೆಯಾಗಿದ್ದು, ಎರಡು ಗುಂಪಿನವರು ಪರಸ್ಪರ ಕಲ್ಲು ತೂರಾಟ ಮಾಡಿದ್ದಾರೆ. ಸ್ಥಳದಲ್ಲಿದ್ದ ಲಾರಿಗಾಜು ಪುಡಿ ಪುಡಿಯಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಯಡ್ರಾಮಿ ಪೊಲೀಸರು ದೌಡಾಯಿಸಿ ಪರಿಸ್ಥಿತಿ ಹತೋಟಿಗೆ ತರಲು ಹರಸಾಹಸ ಪಟ್ಟಿದ್ದಾರೆ. ಈ ವೇಳೆ ಪೊಲೀಸ್ ಜೀಪ್ ಗಾಜು ಸಹ ಪುಡಿಯಾಗಿದೆ ಎಂದು ತಿಳಿದುಬಂದಿದೆ.
ಈ ವೇಳೆ ಗಾಯಗೊಂಡವರನ್ನು ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.