ಕಲಬುರಗಿ: ಭಾರತದ ಸಂಸ್ಕೃತಿ ವಿಶ್ವದ ಸಂಸ್ಕೃತಿಗಿಂತ ವಿಭಿನ್ನವಾದದ್ದು, ನಿಮ್ಮ ಜೀವನದಲ್ಲಿ ಪಡೆಯುತ್ತಿರುವ ಜ್ಞಾನ ವೃದ್ದಿಸಿಕೊಂಡು ಶ್ರೇಷ್ಠ ಭಾರತ ಮಾಡುವಲ್ಲಿ ಹೆಜ್ಜೆ ಇಡಬೇಕು. ನಮ್ಮ ದೇಶ, ನಮಗೆ ವಿದ್ಯೆ ಕಲಿಸಿದ ಗುರುಗಳು ಹಾಗೂ ತಂದೆ-ತಾಯಿ ನಮ್ಮ ಸಾಧನೆಗೆ ಸ್ಪೂರ್ತಿಯಾಗಿರುತ್ತಾರೆ ಎಂದರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ 39 ಮತ್ತು 40ನೇ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ನಿಮ್ಮ ಸೇವಾ ಕಾರ್ಯಕ್ಕೆ ಅತ್ಯುತ್ತಮ ಪ್ರಶಸ್ತಿ ಲಭಿಸಿದೆ. ಮುಂದಿನ ದಿನಗಳಲ್ಲಿ ಸಹ ನಿಮ್ಮ ಸಮಾಜಮುಖಿ ಕೆಲಸಗಳು ನಿರಂತರವಾಗಿ ನಡೆಯಲಿ ಎಂದು ಆಶಿಸಿ, ವಿವಿಧ ಕ್ಷೇತ್ರಗಳಲ್ಲಿ ಸಾಧನಗೈದು ಪ್ರಶಸ್ತಿಗೆ ಭಾಜನರಾದವರಿಗೆ ಅಭಿನಂದನೆ ಸಲ್ಲಿಸಿದರು.
ಇದೇ ವೇಳೆ ವಿದ್ಯಾರ್ಥಿಗಳನ್ನು ಕುರಿತು, ಚಿನ್ನದ ಪದಕಗಳನ್ನು ಪಡೆದವರು ಇನ್ನೊಬ್ಬರಿಗೆ ಪ್ರೇರಣಾದಾಯಿ ಆಗಬೇಕು. ನಿಮ್ಮ ಜ್ಞಾನವನ್ನು ಇನ್ನೂ ಹೆಚ್ಚಿಸಿಕೊಂಡು ಇತರರಿಗೆ ಜ್ಞಾನವನ್ನು ಧಾರೆಯೆರೆಯಬೇಕು. ಹಾಗಾದಾಗಲೇ ನಮ್ಮ ಜ್ಞಾನಕ್ಕೆ ಬೆಲೆ ಎಂದರು.
39ನೇ ಘಟಿಕೋತ್ಸವದ ಅಂಗವಾಗಿ ಸಮಾಜಿಕ ಕಾರ್ಯ ಕ್ಷೇತ್ರದಲ್ಲಿ ಸಾಧನೆಗೆ ಬೀದರ ಜಿಲ್ಲೆಯ ಸಿದ್ದರಾಮ ಶರಣರು(ಬೆಲ್ದಾಳ ಶರಣರು), ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗೆ ಬೀದರ ಜಿಲ್ಲೆಯ ಡಾ. ಬಸವರಾಜ ಜಿ. ಪಾಟೀಲ ಅಷ್ಟೂರ ಹಾಗೂ ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗೆ ಕಲಬುರಗಿ ಜಿಲ್ಲೆಯ ವೇಣುಗೋಪಾಲ ಡಿ. ಹೆರೂರ ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಸಮಾಜಕಾರ್ಯ ಕ್ಷೇತ್ರದಲ್ಲಿ ಅಮೋಘ ಸಾಧನೆಗೆ ವಿಜಯಪುರ ಜಿಲ್ಲೆಯ ಗುರಮ್ಮ ಸಿದ್ಧಾರೆಡ್ಡಿ, ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗೆ ಮಂಗಳೂರು ಮೂಲದ ಯೇನಪೊಯ ಅಬ್ದುಲ್ಲಾ ಕುನ್ಹಿ ಹಾಗೂ ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗೆ ಗೌತಮ್ ರಾಧಾಕೃಷ್ಣ ದೇಸಿರಾಜು ಅವರನ್ನು ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿ.ವಿ.ಕುಲಪತಿ ಪ್ರೊ. ದಯಾನಂದ ಅಗಸರ, ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ ನಿರ್ದೇಶಕ ಪ್ರೊ.ಎಸ್.ಸಿ. ಶರ್ಮಾ ಘಟಿಕೋತ್ಸವ ನಿಮಿತ್ತ ವಿಶೇಷ ಭಾಷಣ ಮಾಡಿದರು. ಗುಲ್ಬರ್ಗ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿ ಪ್ರೊ.ದಯಾನಂದ ಅಗಸರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದನ್ನೂ ಓದಿ: 'ಹಿಂದಿ ರಾಷ್ಟ್ರೀಯ ಭಾಷೆಯಲ್ಲ' ಎಂದ ಸುದೀಪ್‌ಗೆ ಅಜಯ್ ದೇವಗನ್ ಖಾರ ಪ್ರತಿಕ್ರಿಯೆ; ನೆಟ್ಟಿಗರಿಂದ ತರಾಟೆ