ಕಲಬುರಗಿ : ಕ್ಷೇತ್ರಕ್ಕೆ ಬರುವ ಅನುದಾನವನ್ನು ಹಾಲಿ ಹಾಗೂ ಮಾಜಿ ಶಾಸಕರಿಬ್ಬರು ಸೇರಿ ಗುಳಂ ಮಾಡಿದ್ದೀರಿ. ತಾಲೂಕಿನಲ್ಲಿ ಅಭಿವೃದ್ಧಿ ಕೆಲಸ ಮಾಡದೆ ತಾಲೂಕನ್ನು ಹಾಳು ಮಾಡಿದ್ದೀರಿ ಎಂದು ಅಫ್ಜಲ್‌ಪುರ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಎಂ ವೈ ಪಾಟೀಲ್‌ಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಕ್ಷೇತ್ರಕ್ಕೆ ಸರ್ಕಾರದಿಂದ ಸಾವಿರಾರು ಕೋಟಿ ರೂ. ಅನುದಾನ ಬಂದಿದೆ. ಕ್ಷೇತ್ರದ ಅಭಿವೃದ್ಧಿ ಕಾಮಗಾರಿಯಲ್ಲಿ ಶಾಸಕ ಎಂ.ವೈ. ಪಾಟೀಲ್‌ಗೆ ಶೇ.60ರಷ್ಟು ಅದೇ ರೀತಿ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಶೇ.40ರಷ್ಟು ಕಮಿಷನ್ ಪಡೆದುಕೊಂಡು ತಾಲೂಕನ್ನು ಹಾಳು ಮಾಡುತ್ತಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ಇದಕ್ಕೆ ಇಲಾಖೆಯ ಅಧಿಕಾರಿಗಳು ಸಾಥ್ ನೀಡುತ್ತಿರುವುದಾಗಿ ಇದೇ ವೇಳೆ ಹೇಳಿದ್ದಾರೆ.
ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಮಾಡಿದ ಕೆಲಸಗಳೂ ಕಳಪೆ ಮಟ್ಟದಿಂದ ಕೂಡಿವೆ ಎಂದು ಶಾಸಕರ ವಿರುದ್ಧ ಕಿಡಿಕಾರಿದರು. ಅಫ್ಜಲ್‌ಪುರ ತಹಶೀಲ್ದಾರ್ ಕಚೇರಿಯಲ್ಲಿ ಶಾಸಕರನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು,ಜೊತೆಗೆ ತಹಶೀಲ್ದಾರ್ ಈ ಕುರಿತು ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.
ಅಂಬೇಡ್ಕರ್ ಭವನಕ್ಕೆ ನೀಡಿದ ಅನುದಾನವನ್ನು ತಿಂದು ತೇಗಿದ್ದೀರಿ ಅಂತಾ ಪಾಟೀಲ್ ಅವರನ್ನು ದೂರಿದ್ದಾರೆ. ಜನರ ಆಕ್ರೋಶಭರಿತ ಮಾತುಗಳನ್ನು ಶಾಸಕ ಪಾಟೀಲ್ ಸುಮ್ಮನೆ ಕೇಳುತ್ತಿದ್ದರು.
ಓದಿ : ನ್ಯೂಜೆರ್ಸಿಯಲ್ಲಿ ಪುನೀತ್ ಭಾವಚಿತ್ರಕ್ಕೆ ಮಗಳು ಧೃತಿಯಿಂದ ಪೂಜೆ!