ಕಲಬುರಗಿ: ಸತತ ಭೂಕಂಪನದಿಂದ ಆತಂಕಗೊಂಡು ಗ್ರಾಮವನ್ನು ತೊರೆಯುತ್ತಿರುವ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮಸ್ಥರಿಗೆ ಧೈರ್ಯ ತುಂಬಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗ್ರಾಮಕ್ಕೆ ಭೇಟಿ ನೀಡಿದ್ದರು.
ಈ ವೇಳೆ ಅವರು ಗ್ರಾಮದಲ್ಲಿರುವಾಗಲೇ ಮತ್ತೆ ಭೂ ಕಂಪಿಸಿದೆ. ಭೂಕಂಪನದ ಬಗ್ಗೆ ಸ್ವತಃ ಅನುಭವ ಪಡೆದ ಸಿದ್ದರಾಮಯ್ಯ ಸ್ಥಳದಿಂದಲೇ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಕರೆ ಮಾಡಿ ಪರ್ಯಾಯ ವ್ಯವಸ್ಥೆ ಕೈಗೊಳ್ಳಲು ಸಲಹೆ ನೀಡಿದ್ದಾರೆ.
ಗಡಿಕೇಶ್ವರದಿಂದಲೇ ಕಂದಾಯ ಸಚಿವರಿಗೆ ಸಿದ್ದು ಕಾಲ್
ಕಲಬುರಗಿ ಜಿಲ್ಲೆಯ ಗಡಿಕೇಶ್ವರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಗ್ರಾಮಸ್ಥರೊಂದಿಗೆ ಸಭೆ ನಡೆಸ್ತಿದ್ದ ವೇಳೆ ರಾತ್ರಿ 8:01 ನಿಮಿಷಕ್ಕೆ ಮತ್ತೆ ಭೂಕಂಪನ ಸಂಭವಿಸಿದೆ. ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಗಡಿಕೇಶ್ವರ ಗ್ರಾಮದಲ್ಲಿದ್ದ ಸಿದ್ದರಾಮಯ್ಯ ಅವರಿಗೂ ಇದು ಅನುಭವಕ್ಕೆ ಬಂದಿದೆ. ತಕ್ಷಣ ಗಡಿಕೇಶ್ವರ ಗ್ರಾಮದಿಂದಲೇ ಕಂದಾಯ ಸಚಿವ ಆರ್ ಅಶೋಕ್ ಅವರಿಗೆ ಕರೆಮಾಡಿ ಸಿದ್ದರಾಮಯ್ಯ ಮಾತನಾಡಿದರು.
ಸೂಕ್ತ ವ್ಯವಸ್ಥೆ ಮಾಡಿ... ಜನರ ರಕ್ಷಣೆಗೆ ಬನ್ನಿ
2-3 ವರ್ಷದಿಂದ ಭೂಮಿಯಿಂದ ಸತತವಾಗಿ ಸದ್ದು ಬರುತ್ತಿದ್ದು, ಜನ ರೋಸಿ ಹೋಗಿದ್ದಾರೆ. ಕಳೆದ 15 ದಿನಗಳಿಂದ ಸದ್ದಿನೊಂದಿಗೆ ಭೂಕಂಪನದ ಅನುಭವ ಸಹ ಆಗಿದೆ.ಇದರಿಂದ ತೊಂದರೆ ಅನುಭವಿಸಿರುವ ಕಾರಣ ಈಗಾಗಲೇ ಶೇ. 75 ರಷ್ಟು ಜನ ಊರು ತೊರೆದಿದ್ದಾರೆ. ಇರುವ ಜನರು ಆತಂಕದಿಂದ ದಿನ ಕಳೆಯುತ್ತಿದ್ದಾರೆ. ಇವರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಟ್ಟು ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು. ಊಟ, ಬಟ್ಟೆ ಬೆಡ್‌ಶಿಟ್ ಸೇರಿದಂತೆ ಜೀವನಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ನೀಡುವ ವ್ಯವಸ್ಥೆ ತಕ್ಷಣ ಮಾಡುವಂತೆ ಹೇಳಿದರು.
ಕಳೆದ 15 ದಿನಗಳಿಂದ ಹತ್ತಾರು ಹಳ್ಳಿಗಳಲ್ಲಿ ಕಂಪನದ ಅನುಭವ
ಕಳೆದ 15 ದಿನಗಳಿಂದ ಗಡಿಕೇಶ್ವರ ಮತ್ತು ಸುತ್ತ ಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗುತ್ತಲೆ ಇದೆ. ಸೋಮವಾರ ರಾತ್ತಿ 9-55 ಕ್ಕೆ ಚಿಂಚೋಳಿ, ಕಾಳಗಿ, ಸೇಡಂ ತಾಲೂಕಿನ ಬಹುತೇಖ ಗ್ರಾಮಗಳಲ್ಲಿ ಭೂಕಂಪನ ಆಗಿದ್ದು, ರಿಕ್ಟರ್ ಮಾಪನದಲ್ಲಿ 4.1 ತೀವ್ರತೆ ದಾಖಲಾಗಿದೆ. ಇದರಿಂದ ಕಲಬುರಗಿ ಜಿಲ್ಲೆಯ ಜನರು ಆತಂಕದಲ್ಲಿದ್ದಾರೆ.