ಕಲಬುರಗಿ : ಕೋವಿಡ್ ಸೋಂಕಿನ ಪ್ರಭಾವ ತಗ್ಗಿದ ಬೆನ್ನಲ್ಲೇ ನೆರೆಯ ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಜಿಲ್ಲೆಯಲ್ಲಿ ಆತಂಕ ಶುರುವಾಗಿದೆ.
ಲಾಕ್‌ಡೌನ್ 2.0 ಓಪನ್ ಆದ ಮೇಲೆ ಕಲಬುರಗಿಯಿಂದ ಮಹಾರಾಷ್ಟ್ರದ ಸೊಲ್ಲಾಪುರ, ಉಮ್ಮರಗಾ, ಸಾಂಗ್ಲಿ, ಮಿರಜ್‌ಗೆ ನಿತ್ಯವೂ ಬಸ್ಗಳ ಓಡಾಟ ಪ್ರಾರಂಭವಾಗಿದೆ. ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕಲಬುರಗಿ ಜಿಲ್ಲೆಗೂ ಸೋಂಕು ಹರಡುವ ಭೀತಿ ಎದುರಾಗಿದೆ.
ಈ ನಿಟ್ಟಿನಲ್ಲಿ ಜಾಗ್ರತವಾಗಿರುವ ಜಿಲ್ಲಾಡಳಿತ ಗಡಿ ಭಾಗದಲ್ಲಿ ಚೆಕ್‌ಪೋಸ್ಟ್ ನಿರ್ಮಾಣ ಮಾಡಿದೆ. ಮಹಾರಾಷ್ಟ್ರದಿಂದ ಬರುವ ಪ್ರತಿಯೊಬ್ಬರಿಗೂ ಆರ್ಟಿಪಿಸಿಆರ್ (RTPCR) ನೆಗೆಟಿವ್ ವರದಿ ಕಡ್ಡಾಯಗೊಳಿಸಿದೆ.
ಜಿಲ್ಲಾಡಳಿತ ಸಾಕಷ್ಟು ಕಟ್ಟುನಿಟ್ಟಿನ ಕ್ರಮಕೈಗೊಂಡರೂ ನಿತ್ಯ ನೂರಾರು ಸಂಖ್ಯೆಯಲ್ಲಿ ಜನ ಜಿಲ್ಲೆ ಪ್ರವೇಶ ಮಾಡುತ್ತಿದ್ದಾರೆ. ಹೀಗೆ ಬರುವ ಜನರು ಯಾವುದೇ ಪರೀಕ್ಷೆಗೊಳಪಡುತ್ತಿಲ್ಲ. ಹಾಗಾಗಿ, ಜಿಲ್ಲೆಯಲ್ಲಿ ಡೆಲ್ಟಾ ಪ್ಲಸ್ ಸೋಂಕಿನ ಸಂಖ್ಯೆ ಹೆಚ್ಚಳದ ಆತಂಕ ಎದುರಾಗಿದೆ.