ಕಲಬುರಗಿ/ಹುಬ್ಬಳ್ಳಿ/ಗುರುಮಠಕಲ್/ಚಿತ್ರದುರ್ಗ : ನಗರದಲ್ಲಿ ಇಂದು ಕೂಡ ವೀಕೆಂಡ್ ಕರ್ಫ್ಯೂ ರೂಲ್ಸ್ ಸಂಪೂರ್ಣ ಉಲ್ಲಂಘನೆ ಮಾಡಲಾಗುತ್ತಿದೆ. ಕಲಬುರಗಿಯ ಕಣ್ಣಿ ಮಾರ್ಕೆಟ್ನಲ್ಲಿ ಜನ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪು ಗುಂಪಾಗಿ ತರಕಾರಿ ಖರೀದಿಯಲ್ಲಿ ತೊಡಗಿರುವ ದೃಶ್ಯ ಸಾಮಾನ್ಯವಾಗಿತ್ತು.
ಮಾರ್ಕೆಟ್ ಅಸೋಸಿಯೇಷನ್ ಮಾಸ್ಕ್ ಇಲ್ಲದೆ ತರಕಾರಿ ನೀಡುವುದಿಲ್ಲ ಎಂದು ಘೋಷಿಸಿದರು ಸಹ ಜನ ಅಸೋಸಿಯೇಷನ್ ಜತೆಗೆ ವಾಗ್ವಾದಕ್ಕಿಳಿದಿದ್ದಾರೆ. ಇತ್ತ ವ್ಯಾಪಾರಸ್ಥರು ಕೂಡ ಮಾಸ್ಕ್ ಧರಿಸದೆ ವ್ಯಾಪಾರ, ವಹಿವಾಟಿನಲ್ಲಿ ತೊಡಗಿದ್ದರು.
ವಾಣಿಜ್ಯ ನಗರಿಯಲ್ಲಿ ಉತ್ತಮ ಪ್ರತಿಕ್ರಿಯೆ : ವೀಕೆಂಡ್ ಕರ್ಫ್ಯೂ 2ನೇ ದಿನವೂ ವಾಣಿಜ್ಯ ನಗರಿ ಹುಬ್ಬಳ್ಳಿಯ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆಯಿಂದಲೇ ಪೊಲೀಸರು ಚೆನ್ನಮ್ಮ ವೃತ್ತದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾರೆ. ಕರ್ಫ್ಯೂ ಹಿನ್ನೆಲೆ ಜನರ ಓಡಾಟ ಕಡಿಮೆಯಾಗಿದೆ. ನಿನ್ನೆ(ಶನಿವಾರ) ಕೊಂಚ ಓಡಾಟ ಜಾಸ್ತಿ ಇತ್ತು. ಪೊಲೀಸರು ವಿನಾಕಾರಣ ಮನೆಯಿಂದ ಆಚೆ ಬಾರದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.
ನಗರದ ಪ್ರಮುಖ ಮಾರ್ಕೆಟ್ ಸಂಪೂರ್ಣ ಬಂದ್ : ದುರ್ಗದಬೈಲ್, ಜನತಾ ಬಜಾರ್ ಸೇರಿದಂತೆ ವಿವಿಧ ಮಾರ್ಕೆಟ್ಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಾರ್ಕೆಟ್ ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಪೊಲೀಸರು ಗಸ್ತು ತಿರುಗುತ್ತಿರುವುದರಿಂದ ಜನ ಸಂಚಾರಕ್ಕೆ ಬ್ರೇಕ್ ಬಿದ್ದಿದೆ. ಇನ್ನು ಬಸ್ ಸಂಚಾರ ವಿರಳವಾಗಿವೆ. ಪ್ರಯಾಣಿಕರ ಸಂಖ್ಯೆಗನುಗುಣವಾಗಿ ಬಸ್ ಸಂಚರಿಸುತ್ತಿವೆ.
ದಿನಸಿ, ತರಕಾರಿ, ಹೂ-ಹಣ್ಣು ವ್ಯಾಪಾರಕ್ಕೆ ಅವಕಾಶವಿದ್ದರೂ ವ್ಯಾಪಾರಸ್ಥರಿಲ್ಲದೇ ಮಾರುಕಟ್ಟೆಗಳು ಬಣಗುಡುತ್ತಿವೆ. ದುರ್ಗದಬೈಲ್, ಗಾಂಧಿ ಮಾರುಕಟ್ಟೆ ಹಾಗೂ ಜನತಾ ಬಜಾರ್ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಗ್ರಾಹಕರಿಲ್ಲದೆ ಕಂಗಾಲಾಗಿದ್ದಾರೆ. ಇನ್ನು ಸರ್ಕಾರ ಹೂವು ಮಾರಾಟ ಮಾಡಲು ಅವಕಾಶ ನೀಡಿದೆ. ಆದರೆ, ಕೊಂಡುಕೊಳ್ಳುವವರಿಲ್ಲ. ಈ ರೀತಿಯ ಸರ್ಕಾರದ ರೂಲ್ಸ್‌ಗಳಿಂದ ಹೂ, ಹಣ್ಣು ಮಾರಾಟಗಾರರು ಹಾಗೂ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಾಸ್ಕ್ ಧರಿಸದವರಿಗೆ ದಂಡ : ವೀಕೆಂಡ್ ಕರ್ಫೂ ಜಾರಿ ಹಿನ್ನೆಲೆ ಗುರುಮಠಕಲ್ ಪಟ್ಟಣ ಸೇರಿದಂತೆ ಎಲ್ಲಾ ಗ್ರಾಮೀಣ ಪ್ರದೇಶದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರ ಸೂಚಿಸಿದ ನಿಯಮಗಳನ್ನು ಪಾಲಿಸುವ ಮೂಲಕ ತಾವು ತಮ್ಮ ಕುಟುಂಬವನ್ನು ಸೋಂಕಿನಿಂದ ರಕ್ಷಿಸಿಕೊಳ್ಳುವಂತೆ ಪಿ.ಐ ಖಾಜಾ ಹುಸೇನ್ ಮನವಿ ಮಾಡಿದ್ದಾರೆ.
ಶನಿವಾರ ಪಟ್ಟಣದ ಕಾಕಲವಾರ ಬೇಸ್ ಬಳಿ ವಾಹನ ತಪಾಸಣೆ ನಡೆಸಿದ ಅವರು, ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದ ಪಟ್ಟಣದ ಉದ್ಯಮಿ ಮತ್ತು ಪುರಸಭೆ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ದಂಡ ವಿಧಿಸಿದರು. ಕಳೆದೆರಡು ದಿನಗಳಿಂದ ಪುರಸಭೆ ಮತ್ತು ಪೊಲೀಸ್ ಇಲಾಖೆ ಅನವಶ್ಯಕವಾಗಿ ತಿರುಗಾಡದಂತೆ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದೆ.
ಕೋಟೆನಾಡು ಚಿತ್ರದುರ್ಗ ಸಂಪೂರ್ಣ ಸ್ತಬ್ಧ: ವೀಕೆಂಡ್ ಕರ್ಫ್ಯೂಗೆ ಕೋಟೆನಾಡು ಚಿತ್ರದುರ್ಗ ಇಂದು ಕೂಡ ಸ್ತಬ್ದವಾಗಿತ್ತು. ಹಾಲು, ತರಕಾರಿ ಹೊರತು ಪಡಿಸಿ ಉಳಿದೆಲ್ಲ ಸೇವೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಪೊಲೀಸರು ಬೆಳ್ಳಂಬೆಳಗ್ಗೆ ಮೈಕ್ ಹಿಡಿದು ಅನಗತ್ಯ ಹೊರಗೆ ಬರದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಟ್ರಕ್, ಲಾರಿ ಬಿಟ್ಟರೇ ಯಾವುದೇ ಬಸ್, ಆಟೋ, ಕಾರುಗಳು ರಸ್ತೆಗೆ ಇಳಿದಿಲ್ಲ.
ಪ್ರತಿ ದಿನ ತುಂಬಿ ತುಳುಕುತ್ತಿದ್ದ ಆಟದ ಮೈದಾನಗಳು, ಪಾರ್ಕ್ಗಳು ಬಣಗುಡುತ್ತಿದ್ದವು. ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ ಸಿಬ್ಬಂದಿಯೊಂದಿಗೆ ರಸ್ತೆಗಿಳಿದು ರಸ್ತೆಯಲ್ಲಿ ಓಡಾಡುವರಿಗೆ ಮಾಸ್ಕ್ ಧರಿಸುವಂತೆ ಸೂಚನೆ ನೀಡಿ, ತಮ್ಮ ಆರೋಗ್ಯದ ಮೇಲೆ ಕಾಳಜಿವಹಿಸುವಂತೆ ಜಾಗೃತಿ ಮೂಡಿಸಿದರು.
ಇದನ್ನೂ ಓದಿ: ಕೊರೊನಾ ನಿಯಮ ಗಾಳಿಗೆ ತೂರಿದ ಜನ: ಲಾಠಿ ರುಚಿ ತೋರಿಸಿದ ಪೊಲೀಸರು