ಕಲಬುರಗಿ : ಭಿಕ್ಷೆ ಬೇಡುವುದು ಬೇಡ ಅಂತಾ ಬುದ್ದಿವಾದ ಹೇಳಿದಕ್ಕೆ ಮನೆಗೆ ನುಗ್ಗಿ ಮಂಗಳಮುಖಿಯ ಮೇಲೆ ಮಂಗಳಮುಖಿಯರೇ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಕಲಬುರಗಿಯ ಲಂಗರ್ ಗಲ್ಲಿಯಲ್ಲಿ ನಡೆದಿದೆ. ಕಳೆದ ಭಾನುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮನಿಷಾ ಚೌಹಾಣ್ ಎಂಬುವರು ಹಲ್ಲೆಗೊಳಗಾದ ಮಂಗಳಮುಖಿ. ಸದ್ಯ ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ಸು ಆತನೂರ, ಬೇಬಿ, ಪೀರಪ್ಪ, ಸನಾ, ಸಂತೋಷಿ ಹಾಗೂ ಶೀಲಾ ಎಂಬುವರು ಸೇರಿದಂತೆ 8 ಮಂಗಳಮುಖಿಯರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮನಿಷಾ ಆರೋಪಿಸಿದ್ದಾರೆ.
ಹಲ್ಲೆಗೊಳಗಾದ ಮನಿಷಾ, ಸ್ನೇಹಾ ಸೊಸೈಟಿಯ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದರು. ಸೊಸೈಟಿಯ ಹಣಕಾಸಿನ ಲೆಕ್ಕಾಚಾರ ಕೇಳಿದ್ದ ಗುಂಪಿಗೆ, ಭಿಕ್ಷೆ ಬೇಡಿ ಹಣ ಸಂಪಾದಿಸಬೇಡಿ. ದುಡಿದು ತಿನ್ನಿ ಎಂದು ಮನಿಷಾ ಬುದ್ದಿವಾದ ಹೇಳಿದ್ದರಂತೆ.
ಅದಕ್ಕೆ ಹಲ್ಲೆ ನಡೆದಿದೆ ಎಂದು ಮನಿಷಾ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ಇವರ ವಿರುದ್ಧ ಜ್ಯೋತಿ ಚೌಹಾಣ್ ಎಂಬುವರು ಪ್ರತಿ ದೂರು ದಾಖಲಿಸಿದ್ದಾರೆ.
ಸೊಸೈಟಿಯ ಹಣಕಾಸಿನ ವಿಚಾರಕ್ಕಾಗಿ ಗಲಾಟೆ ನಡೆದಿದೆ ಎನ್ನಲಾಗ್ತಿದೆ. ಸದ್ಯ ಎರಡು ಕಡೆಯವರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ನಗರ ಪೊಲೀಸ್ ಆಯುಕ್ತ ಎನ್. ರವಿಕುಮಾರ ಹೇಳಿದ್ದಾರೆ.
ಇದನ್ನೂ ಓದಿ: ಬೈಕ್ಗೆ ಕಬ್ಬು ತುಂಬಿದ ಲಾರಿ ಡಿಕ್ಕಿ : ಯುವತಿ ಸಾವು, ತಂದೆಗೆ ಗಾಯ