ಕಲಬುರಗಿ: ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರವಿದ್ದು, ಕಾಂಗ್ರೆಸ್‌ನವರು ನಿರುದ್ಯೋಗಿಗಳಾಗಿದ್ದಾರೆ. ಮಾತನಾಡಲು ಅವರಿಗೆ ಏನೂ ಸಿಗುತ್ತಿಲ್ಲ. ಅದಕ್ಕಾಗಿ ಬಿಟ್ ಕಾಯಿನ್ ವಿಚಾರ (bitcoin scam) ಇಟ್ಟುಕೊಂಡು ಗಡಿಬಿಡಿ ಮಾಡುತ್ತಿದ್ದಾರೆ ಎಂದು ಕಲಬುರಗಿಯಲ್ಲಿ ಗೃಹ ಸಚಿವ ಅಗರ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕರು ಬಿಟ್ ಕಾಯಿನ್ ವಿಷಯ ಇಟ್ಟುಕೊಂಡು ಮನಸ್ಸಿಗೆ ತೋಚಿದಂತೆ ಮಾತನಾಡುತ್ತಿದ್ದಾರೆ. ಆದ್ರೆ 2018ರಲ್ಲಿ ಶ್ರೀಕಿಯನ್ನು ಅರೆಸ್ಟ್ (hacker shreeki) ಮಾಡಿದಾಗ ಪ್ರಕರಣ ಮುಚ್ಚಿಹಾಕಿದ್ದು ಇದೇ ಕಾಂಗ್ರೆಸ್. ಇಂದು ನಾವು ಮುಚ್ಚಿ ಹಾಕಿದ್ದನ್ನ ಬಿಚ್ಚಿಟ್ಟಿದ್ದೇವೆ. ಶ್ರೀಕಿ ಎಂತಹ ಹ್ಯಾಕರ್ ಅನ್ನೋದನ್ನು ನಾವು ಬೆಳಕಿಗೆ ತಂದಿದ್ದೇವೆ. ಅತ್ಯಂತ ಪಾರದರ್ಶಕವಾಗಿ ತನಿಖೆ ನಡೆಸುತ್ತಿದ್ದೇವೆ. ಶ್ರೀಕಿ ಕಾಂಗ್ರೆಸ್ ನವರ ಮಕ್ಕಳಿಗೆ ಡ್ರಗ್ಸ್ ತರಿಸಿಕೊಡುತ್ತಿದ್ದ. ಗೋವಾದಲ್ಲಿ ಅವರ ಮಕ್ಕಳ ಜೊತೆಗೆ ಸಿಕ್ಕಿಬಿದ್ದಿದ್ದ. ಅವನನ್ನು ಹಿಡಿದು ತನಿಖೆ ಮಾಡಿದ್ದೆ ತಪ್ಪು ಅನ್ನೋ ಹಾಗೆ ಕೈ ನಾಯಕರು ಮಾತಾಡ್ತಿದ್ದಾರೆ ಎಂದು ಗುಡುಗಿದರು.
ಸಿಎಂ ತಲೆದಂಡ ಕುರಿತು ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಟಾಂಗ್: ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಏನೇನೋ ಹೇಳಿ ಪಾಂಡಿತ್ಯ ಪ್ರದರ್ಶನ ಮಾಡ್ತಿದ್ದಾರೆ. ನೀವು ಐಟಿ ಬಿಟಿ ಸಚಿವರಿದ್ದಾಗ ಶ್ರೀಕಿಯನ್ನು ಯಾಕೆ ಹಿಡಿಯಲಿಲ್ಲ. ಅವನು ಹ್ಯಾಕರ್ ಅಂತಾ ಆಗ ನಿಮಗೆ ಗೊತ್ತಾಗಲಿಲ್ಲವಾ?. ಬಿಟ್ ಕಾಯಿನ್ ವಿಷಯದಲ್ಲಿ ಸಿಎಂ ತೆಲೆ ತಂಡ ಆಗುವದಿಲ್ಲ. ನಿಮ್ಮ ತಲೆದಂಡನೇ ಆಗುತ್ತೆ ಅಂತ ಪ್ರಿಯಾಂಕ್ ಖರ್ಗೆಗೆ ಗೃಹ ಸಚಿವರು ಟಾಂಗ್ ಕೊಟ್ಟರು.
ಕುಮಾರಸ್ವಾಮಿ ತರ ದಿನಕ್ಕೆ ಎರು ಬಾರಿ ಕ್ಯಾಮರಾ ಮುಂದೆ ನಿಲ್ಬೇಕಾ..? : ರಾಜ್ಯದಲ್ಲಿ ಮಹಾಮಳೆಯಿಂದ ಜನರು ಸಂಕಷ್ಟದಲ್ಲಿರುವಾಗ ಆಡಳಿತಾರೂಢ ಬಿಜೆಪಿ ಪಕ್ಷ ಶಂಖ ಊದಿಕೊಂಡು ಜನ ಸ್ವರಾಜ್ ಯಾತ್ರೆ ಅಂತ ಶುರು ಮಾಡಿಕೊಂಡಿದೆ ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರ ಹೇಳಿಕೆಗೆ ಗೃಹ ಸಚಿವರು ಪ್ರತಿಕ್ರಿಯೆ ನೀಡಿದರು. ಕುಮಾರಸ್ವಾಮಿ ತರಹ ಬೆಂಗಳೂರಿನಲ್ಲಿ ಇದ್ದುಕೊಂಡು ದಿನಕ್ಕೆ ಎರಡು ಬಾರಿ ಕ್ಯಾಮರಾ ಮುಂದೆ ನಿಲ್ಲಕ್ಕೆ ಆಗುತ್ತಾ?. ಬೆಂಗಳೂರಿನಲ್ಲಿ ಇದ್ದು ಮೀಟಿಂಗ್ ಮಾಡಿದ್ರೆ ಹಳ್ಳಿ ಕಡೆ ಹೋಗ್ತಿಲ್ಲ ಅಂತಾರೆ. ಹಳ್ಳಿ ಕಡೆ ಹೋದ್ರೆ ಶಂಕಾ ಊದಿಕೊಂಡು ಒಡಾಡ್ತಿದ್ದಾರೆ ಅಂತಾರೆ. ನಾವೇನ್ ಕುಮಾರಸ್ವಾಮಿ ಹತ್ರ ಕೇಳಿ ಕೆಲಸ ಮಾಡಬೇಕಾ?, ಜನರ ಕಷ್ಟ ಅರ್ಥ ಮಾಡಿಕೊಳ್ಳುವ ಕೆಲಸ ನಾವು ಮಾಡ್ತಿದ್ದೇವೆ. ನಾಲ್ಕು ತಂಡಗಳಾಗಿ ರಾಜ್ಯದಲ್ಲಿ ಸುತ್ತಾಡುತ್ತಿದ್ದೇವೆ. ಜನರ ಕಷ್ಟಗಳನ್ನು ಸಿಎಂ, ಸಚಿವರುಗಳು ಎಲ್ರೂ ನೋಡ್ತಿದ್ದೇವೆ ಅಂತ ತೀರುಗೇಟು ನೀಡಿದರು.
ಹಂಸಲೇಖ ವಿರುದ್ಧ ಪ್ರಕರಣ ದಾಖಲು ವಿಚಾರ: ಹಂಸಲೇಖ ಓರ್ವ ಮಹಾನ್ ಕಲಾವಿದ ಹಾಗಂತ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಅಂತೇನಲ್ಲ. ಪ್ರಕರಣ ದಾಖಲಾಗಿದೆ, ನೋಟಿಸ್ ನೀಡಿದ್ರೂ ವಿಚಾರಣೆಗೆ ಹಾಜರಾಗಿಲ್ಲ, ಇದೀಗ ಕಾನೂನಿನ ಅಡಿಯಲ್ಲಿದ್ದಾರೆ. ಎಲ್ಲರಂತೆ ಹಂಸಲೇಖ ಅವರ ವಿರುದ್ಧವೂ ಕಾನೂನಿನ ಕ್ರಮ ಕೈಗೊಳ್ಳಲಾಗುತ್ತೆ. ಬಸವನಗುಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಅಂತ ಅರಗ ಜ್ಞಾನೇಂದ್ರ ಅವರು ಹೇಳಿದರು.