ಕಲಬುರಗಿ: ಜಿಲ್ಲೆಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯ ಒಂದಿಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತದೆ. ಇದೀಗ ವಿವಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಬಹಿರಂಗಪಡಿಸಿದ್ದಕ್ಕೆ ತನ್ನ ವಿರುದ್ಧ ದ್ವೇಷ ಸಾಧಿಸಲಾಗುತ್ತಿದೆ ಎಂದು ಮಹಿಳಾ ಅಧ್ಯಾಪಕಿಯೊಬ್ಬರು ವಿವಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಡಾ.ಸುಷ್ಮಾ ಎಂಬುವವರು ಕೇಂದ್ರೀಯ ವಿಶ್ವವಿದ್ಯಾಲಯದ ಸ್ಕೂಲ್ ಆಪ್ ಎಜುಕೇಶನ್ ಆ್ಯಂಡ್ ಟ್ರೈನಿಂಗ್ ವಿಭಾಗದಲ್ಲಿ ಗುತ್ತಿಗೆ ಆಧಾರದ ಮೇಲೆ ಸಹಾಯಕ ಪ್ರಾಧ್ಯಾಪಕಿಯಾಗಿ 2018ರಲ್ಲಿ ನೇಮಕವಾಗಿದ್ದರು. ತಾವು ಕೆಲಸ ಮಾಡುತ್ತಿದ್ದಾಗ ವಿಭಾಗದಲ್ಲಿ ಎರಡು ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಇದನ್ನು ವಿವಿಯ ಮುಖ್ಯಸ್ಥರ ಗಮನಕ್ಕೆ ತಂದಿದ್ದು, ಜೊತೆಗೆ ಲಿಖಿತ ದೂರನ್ನೂ ನೀಡಿದ್ದೆ ಎಂದು ಸುಷ್ಮಾ ಹೇಳಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆಯ ವಿಷಯ ದೊಡ್ಡದಾದ್ರೆ ವಿಶ್ವವಿದ್ಯಾಲಯಕ್ಕೆ ಕೆಟ್ಟ ಹೆಸರು ಬರುತ್ತದೆ ಅಂತ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ ಎಂದು ಸುಷ್ಮಾ ಆರೋಪಿಸಿದ್ದು, ಜೊತೆಗೆ ತನ್ನ ವಿರುದ್ಧ ಕೆಲ ವಿದ್ಯಾರ್ಥಿಗಳಿಂದ ದೂರನ್ನು ಕೊಡಿಸಿ, ತನ್ನನ್ನು ಕೆಲಸದಿಂದ ತೆಗೆದು ಹಾಕಿ ಹಗೆತನ ಸಾಧಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಆರೋಪ ಅಲ್ಲಗಳೆದ ಸಿಯುಕೆ
ಡಾ.ಸುಷ್ಮಾ ಮಾಡಿರುವ ಆರೋಪಗಳನ್ನು ವಿವಿ ಅಲ್ಲಗಳೆದಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪ್ರೊ.ಮುಸ್ತಾಕ್ ಅಹ್ಮದ್ ಪಟೇಲ್, ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಅನ್ನೋದು ಸಾಬೀತಾಗಿಲ್ಲ. ಡಾ. ಸುಷ್ಮಾ ಅವರು ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.