ಕಲಬುರಗಿ: ಬೀದರ್ - ಯಾದಗಿರಿ - ಕಲಬುರಗಿ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಈ ವರ್ಷ ಲಾಭದತ್ತ ಮುಖ ಮಾಡಿದೆ. ಪ್ರಸಕ್ತ ಆರ್ಥಿಕ ವರ್ಷ 2 ಕೋಟಿ ರೂಪಾಯಿ ಲಾಭ ಗಳಿಸಿದ್ದು, ಅದನ್ನು ರೈತ ಸಮುದಾಯಕ್ಕೆ ವರ್ಗಾಯಿಸಲು ಒಕ್ಕೂಟ ತೀರ್ಮಾನಿಸಿದೆ ಎಂದು ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ. ಪಾಟೀಲ ತಿಳಿಸಿದ್ದಾರೆ.
ಇಂದು ನಡೆದ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿರುವುದಾಗಿ ಪಾಟೀಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರತಿ ವರ್ಷ ನಮ್ಮ ಒಕ್ಕೂಟ ನಿರೀಕ್ಷಿತ ಆದಾಯ ಗಳಿಸುತ್ತಿರಲಿಲ್ಲ. ಒಕ್ಕೂಟ ಆರಂಭಗೊಂಡ 25 ವರ್ಷದಲ್ಲಿ ಇದೇ ಪ್ರಥಮ ಬಾರಿಗೆ 2 ಕೋಟಿ ರೂಪಾಯಿ ಲಾಭ ಬಂದಿದೆ. ಹೀಗಾಗಿ ಲಾಭವನ್ನು ರೈತ ಸಮುದಾಯಕ್ಕೆ ವರ್ಗಾಯಿಸಲು ತೀರ್ಮಾನಿಸಿದ್ದೇವೆ ಎಂದರು.
ಹಸುವಿನ ಹಾಲಿನ ದರವನ್ನು ಪ್ರತಿ ಲೀಟರ್ಗೆ 2 ರೂಪಾಯಿ ಹಾಗೂ ಎಮ್ಮೆ ಹಾಲಿನ ದರವನ್ನು ಪ್ರತಿ ಲೀಟರ್ಗೆ 3 ರೂಪಾಯಿ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಜನವರಿಯಿಂದ ಮೇ ಅಂತ್ಯದವರೆಗೂ ರೈತರ ಹಾಲಿಗೆ ಹೆಚ್ಚಿನ ದರ ನೀಡಲಾಗುವುದು. ಜೊತೆಗೆ ರೈತರು ಖರೀದಿಸುವ ಪಶು ಆಹಾರದ ಮೇಲೆಯೂ ರಿಯಾಯಿತಿ ನೀಡಲಾಗುವುದು. ಇದರ ಲಾಭ ಪಡೆದು ರೈತರು ಹೆಚ್ಚು ಹೆಚ್ಚು ಹಾಲು ಉತ್ಪಾದನೆ ಮಾಡಬೇಕು. ಬೇಸಿಗೆಯಲ್ಲಿ ಹಾಲಿನ ಕೊರತೆಯನ್ನು ಸರಿದೂಗಿಸಬೇಕು ಎಂದು ಆರ್.ಕೆ. ಪಾಟೀಲ ರೈತ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಸದ್ಯ ಹಾಲು ಒಕ್ಕೂಟಕ್ಕೆ ನಿತ್ಯ 51 ಸಾವಿರ ಲೀಟರ್ ಹಾಲು ಶೇಖರಣೆಗೊಳ್ಳುತ್ತಿದೆ. ಒಕ್ಕೂಟದ ವ್ಯಾಪ್ತಿಯಲ್ಲಿ 28 ಹೆಚ್ಚುವರಿ ಸಂಘಗಳೊಂದಿಗೆ ಸಂಘಗಳ ಸಂಖ್ಯೆ 460ಕ್ಕೆ ಏರಿಕೆಯಾಗಿದೆ ಎಂದು ಪಾಟೀಲ ತಿಳಿಸಿದ್ದಾರೆ.