ನವದೆಹಲಿ: ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಆಯುಕ್ತರ ನೇಮಕಾತಿ ಪ್ರಕ್ರಿಯೆಯಿಂದ ಸಿಜೆಐ ಅವರನ್ನು ಹೊರಗಿಡುವ 'ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತು ಮತ್ತು ಅಧಿಕಾರಾವಧಿ) ಕಾಯ್ದೆ 2023' ಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮಂಗಳವಾರ ಹಿಂದೆ ಸರಿದಿದ್ದಾರೆ.
ತಾವು ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ವಿಚಾರಣೆಯ ಆರಂಭದಲ್ಲಿಯೇ ಹೇಳಿದ ಸಿಜೆಐ ಖನ್ನಾ ಅವರು ಈ ಪ್ರಕರಣದ ವಿಚಾರಣೆಯನ್ನು ಬೇರೊಂದು ನ್ಯಾಯಪೀಠ ನಡೆಸಲಿದೆ ಎಂದು ತಿಳಿಸಿದರು. ಸಿಜೆಐ ಖನ್ನಾ ನೇತೃತ್ವದ ನ್ಯಾಯಪೀಠವು ಮುಂದಿನ ವರ್ಷ ಜನವರಿ 6ರಿಂದ ಪ್ರಾರಂಭವಾಗುವ ವಾರದಲ್ಲಿ ಈ ವಿಷಯವನ್ನು ಪಟ್ಟಿ ಮಾಡಲು ಆದೇಶಿಸಿ, ಈ ಮಧ್ಯದ ಅವಧಿಯಲ್ಲಿ ವಾದಗಳನ್ನು ಪೂರ್ಣಗೊಳಿಸುವಂತೆ ಸಂಬಂಧಿಸಿದ ಪಕ್ಷಗಳಿಗೆ ಸೂಚಿಸಿತು.
ಇದಕ್ಕೂ ಮುನ್ನ ಮಾರ್ಚ್ನಲ್ಲಿ, 2023ರ ಕಾಯ್ದೆಯಡಿ ಚುನಾವಣಾ ಆಯೋಗಕ್ಕೆ ಮಾಡಿದ ಹೊಸ ನೇಮಕಾತಿಗಳನ್ನು ತಡೆಹಿಡಿಯುವಂತೆ ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಅಲ್ಲದೆ ಇದಕ್ಕೂ ಮೊದಲು, ಶಾಸನದ ಅನುಷ್ಠಾನವನ್ನು ತಡೆಹಿಡಿಯುವ ಯಾವುದೇ ಮಧ್ಯಂತರ ಆದೇಶ ಹೊರಡಿಸಲು ಕೂಡ ಉನ್ನತ ನ್ಯಾಯಾಲಯ ನಿರಾಕರಿಸಿತ್ತು.
"ಯಾವುದೇ ತಡೆಯಾಜ್ಞೆ ನೀಡುವುದಿಲ್ಲ. ಈ ರೀತಿಯ ಕಾನೂನನ್ನು ನಾವು ತಡೆಹಿಡಿಯಲು ಸಾಧ್ಯವಿಲ್ಲ" ಎಂದು ಪಿಐಎಲ್ ಕಕ್ಷಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ವಿಕಾಸ್ ಸಿಂಗ್ ಅವರಿಗೆ ಸುಪ್ರೀಂ ಕೋರ್ಟ್ ಹೇಳಿತ್ತು. ಸಂವಿಧಾನದ ಮೂಲ ರಚನೆಯ ಭಾಗವೆಂದು ಪರಿಗಣಿಸಲಾದ ಅಧಿಕಾರದ ಪ್ರತ್ಯೇಕತೆಯನ್ನು ಈ ಶಾಸನವು ಉಲ್ಲಂಘಿಸಿದೆ ಎಂದು ಕಕ್ಷಿದಾರರು ವಾದಿಸಿದ್ದರು.
ಆಯ್ಕೆ ಸಮಿತಿ ಹೇಗಿದೆ?: ಪ್ರಧಾನಿ, ಪ್ರತಿಪಕ್ಷದ ನಾಯಕ (ಅಥವಾ ಅತಿದೊಡ್ಡ ವಿರೋಧ ಪಕ್ಷ) ಮತ್ತು ಪ್ರಧಾನ ಮಂತ್ರಿಯವರಿಂದ ನಾಮನಿರ್ದೇಶನಗೊಳ್ಳುವ ಓರ್ವ ಕೇಂದ್ರ ಕ್ಯಾಬಿನೆಟ್ ಸಚಿವರನ್ನು ಒಳಗೊಂಡ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಮತ್ತು ಇತರ ಚುನಾವಣಾ ಆಯುಕ್ತರನ್ನು (ಇಸಿ) ರಾಷ್ಟ್ರಪತಿಗಳು ನೇಮಕ ಮಾಡಬೇಕು ಎಂದು ಸಂಸತ್ತಿನಲ್ಲಿ ಅಂಗೀಕಾರವಾದ ಶಾಸನದ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಹಲವಾರು ಪಿಐಎಲ್ಗಳನ್ನು ಸಲ್ಲಿಸಲಾಗಿದೆ.
ಡಿಸೆಂಬರ್ 28, 2023ರಂದು ಕೇಂದ್ರ ಸರ್ಕಾರ ಹೊರಡಿಸಿದ ಗೆಜೆಟ್ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಮತ್ತು ಸಿಇಸಿ ಮತ್ತು ಇಸಿಗಳ ನೇಮಕಾತಿಗಾಗಿ ಆಯ್ಕೆ ಸಮಿತಿಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಸೇರಿಸಲು ನಿರ್ದೇಶನ ನೀಡುವಂತೆ ಕೋರಿರುವ ಅರ್ಜಿಯು ನೋಯ್ಡಾ ಮೂಲದ ವಕೀಲರು ಸಲ್ಲಿಸಿದ ಮನವಿಗಳಲ್ಲಿ ಒಂದಾಗಿದೆ.
ಇದಲ್ಲದೆ, ಸಿಇಸಿ ಮತ್ತು ಇತರ ಇಸಿಗಳ ನೇಮಕಾತಿಗಾಗಿ ತಟಸ್ಥ ಮತ್ತು ಸ್ವತಂತ್ರ ಆಯ್ಕೆ ಸಮಿತಿಯನ್ನು ರಚಿಸುವ ಸ್ವತಂತ್ರ ಮತ್ತು ಪಾರದರ್ಶಕ ಆಯ್ಕೆ ವ್ಯವಸ್ಥೆಯನ್ನು ಜಾರಿಗೆ ತರಲು ಭಾರತ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಲಾಗಿದೆ.
ಇದನ್ನೂ ಓದಿ : 6 ಚರ್ಚ್ಗಳನ್ನು ಆರ್ಥೊಡಾಕ್ಸ್ ಚರ್ಚ್ಗೆ ಹಸ್ತಾಂತರಿಸುವಂತೆ ಜಾಕೋಬೈಟ್ ಚರ್ಚ್ಗೆ ಸುಪ್ರೀಂ ಕೋರ್ಟ್ ಆದೇಶ