ಹುಬ್ಬಳ್ಳಿ: ಒಂದು ಕಡೆ ಎರಡು ತಿಂಗಳ ವೇತನ ಕೊಟ್ಟಿಲ್ಲ, ಮತ್ತೊಂದೆಡೆ ಅಂದು ಕೆಲಸಕ್ಕೆ ಬಾರದೆ ಮುಷ್ಕರ ನಡೆಸಿದ್ದಕ್ಕೆ ವರ್ಗಾವಣೆ, ಅಮಾನತು ಶಿಕ್ಷೆ. ಕೋವಿಡ್ ಎರಡನೇ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಕೆಲಸ ಎನ್ನುವ ಮೂಲಕ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ತನ್ನ ಸಿಬ್ಬಂದಿಗೆ ಶಾಕ್ ಕೊಟ್ಟಿದೆ.
ಏಪ್ರಿಲ್ ತಿಂಗಳಲ್ಲಿ ಮುಷ್ಕರ ಮಾಡಿದ್ದ ಸಾರಿಗೆ ಇಲಾಖೆ ಸಿಬ್ಬಂದಿ ವಿರುದ್ಧ ಹಿರಿಯ ಅಧಿಕಾರಿಗಳು ರಿವೆಂಜ್ ತೀರಿಸಿಕೊಳ್ಳುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ.
ಓದಿ: ವಾಯುವ್ಯ ಕರ್ನಾಟಕ ಸಾರಿಗೆ ಸಿಬ್ಬಂದಿಗಿಲ್ಲ ಸಂಬಳ: ಸಾರಿಗೆ ಮುಷ್ಕರಕ್ಕೆ ಸಾಥ್ ನೀಡಿದವರಿಗೆ ಶಾಕ್ ಕೊಟ್ಟ ಸಂಸ್ಥೆ
ಅಂದು ಕೆಲಸಕ್ಕೆ ಕರೆದಾಗ ಬಂದಿಲ್ಲ ಎನ್ನುವ ಕಾರಣಕ್ಕೆ ಸಿಬ್ಬಂದಿ ವಿರುದ್ಧ ಸಮರ ಸಾರಿರುವ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈಗ ಎರಡೂ ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಅನ್ಲಾಕ್ ಬಳಿಕ ಬಸ್ ಸಂಚಾರ ಆರಂಭವಾಗುತ್ತಿದ್ದಂತೆ ಕೆಲಸಕ್ಕೆ ಅವಕಾಶ ನೀಡುತ್ತೇವೆ ಎನ್ನುವ ಮೂಲಕ ಸಿಬ್ಬಂದಿಗೆ ಮತ್ತೊಂದು ಶಾಕ್ ನೀಡಲಾಗಿದೆ.
ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ 21 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಚಾಲಕರು, ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ 17 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿಗೆ ಈಗಾಗಲೇ ಮೊದಲ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಆದರೆ ಎರಡನೇ ಡೋಸ್ ಪಡೆದವರು ಶೇ. 5 ರಷ್ಟು ಸಿಬ್ಬಂದಿ ಮಾತ್ರ.
ಮೇ ತಿಂಗಳಿನಲ್ಲಿ ಮೊದಲ ಡೋಸ್ ಪಡೆಯಲಾಗಿದ್ದು, ಎರಡನೇ ಡೋಸ್ ಪಡೆಯಲು ಇನ್ನೂ ಎರಡು ತಿಂಗಳುಗಳ ಕಾಲ ಕಾಯಬೇಕು. ಎರಡನೇ ಡೋಸ್ ಪಡೆಯದೆ ಡ್ಯೂಟಿ ಮಾಡುವಂತಿಲ್ಲ ಎನ್ನುವ ಆದೇಶದಿಂದ ಮುಂದಿನ ಎರಡು ತಿಂಗಳು ನೌಕರಿಯಿಲ್ಲದೆ ಸಾರಿಗೆ ಸಿಬ್ಬಂದಿ ಮನೆಯಲ್ಲಿ ಕುಳಿತುಕೊಳ್ಳುವಂತಾಗಿದೆ.
ಈಗಲೇ ವೇತನವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಿಬ್ಬಂದಿ ಮತ್ತೆರಡು ತಿಂಗಳು ವೇತನವಿಲ್ಲದೆ ಪರದಾಡಬೇಕಿದೆ. ಒಂದು ಕಡೆ ಸರಿಯಾಗಿ ವೇತನ ನೀಡದೆ ಸತಾಯಿಸುತ್ತಿದ್ದು, ಮತ್ತೊಂದೆಡೆ ಮುಷ್ಕರದಲ್ಲಿ ಭಾಗಿಯಾಗಿದ್ದವರ ಮೇಲಿನ ಶಿಕ್ಷೆ ತೆರವುಗೊಳಿಸದೆ ಸತಾಯಿಸುತ್ತಿದ್ದಾರೆ. ಈಗ ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಡ್ಯೂಟಿ ಕೊಡುತ್ತೇವೆ ಎನ್ನುವ ಮೂಲಕ ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು ಸಿಬ್ಬಂದಿ ವಿರುದ್ಧ ರಿವೇಂಜ್ ತೀರಿಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪಕ್ಕೆ ಪುಷ್ಟಿ ಸಿಕ್ಕಂತಾಗಿದೆ.