ಹುಬ್ಬಳ್ಳಿ: ಕಳೆದ ಅಧಿವೇಶನದಲ್ಲಿ ಗೂಳಿಹಟ್ಟಿಯವರು ತಮ್ಮ ತಾಯಿಯ ಮತಾಂತರದ ಬಗ್ಗೆ ಪ್ರಸ್ತಾಪ ಮಾಡಿದಾಗ ಸದನದಲ್ಲಿದ್ದ ಎಲ್ಲರಿಗೂ ನೋವಾಗಿದೆ. ಇತ್ತೀಚೆಗೆ ಕೆಲವು ಕ್ರಿಶ್ಚಿಯನ್ನರು ಮತಾಂತರ ಕಾರ್ಯದಲ್ಲಿ ತೊಡಗಿಕೊಂಡಿರುವುದು ಕೂಡ ನೀಜ. ಹಾಗಾಗಿ ಬಲವಂತವಾಗಿ ಹಾಗು ಆಮಿಷವೊಡ್ಡಿ ಮತಾಂತರ ಮಾಡುವವರ ವಿರುದ್ಧ ಕಠಿಣ ಕಾನೂನು ತರುವುದು ಅವಶ್ಯವಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಕ್ರಿಶ್ಚಿಯನ್ ಮತಾಂತರಕ್ಕೆ ದಲಿತ ಸಮುದಾಯದ ಜನತೆ ಹೆಚ್ಚು ಬಲಿಯಾಗುತ್ತಿದ್ದಾರೆ. ಇತ್ತೀಚೆಗೆ ಲಿಂಗಾಯತರು ಕೂಡಾ ಮತಾಂತರವಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಕಳೆದ ಅಧಿವೇಶನದಲ್ಲಿ ಗೃಹ ಸಚಿವರು ಕೂಡ ಇದರ ಬಗ್ಗೆ ದೂರು ಬರುತ್ತಿವೆ, ಕಟ್ಟುನಿಟ್ಟಿನ ಕಾನೂನು ತರುತ್ತೇವೆ ಎಂದು ತಿಳಿಸಿದ್ದಾರೆ. ನಮ್ಮ ಅಭಿಪ್ರಾಯ ಕೂಡಾ ಅದೇ ಆಗಿದೆ ಎಂದರು.
ಜನರು ತಾವೇ ಒಪ್ಪಿಕೊಂಡು ಬೇರೆ ಧರ್ಮಕ್ಕೆ ಹೋಗುವುದು ಬೇರೆಯಾಗುತ್ತದೆ. ಆದರೆ ಇಲ್ಲಿ ಬಲವಂತವಾಗಿ ಕೆಲವು ಅಮಿಷಗಳನ್ನು ತೋರಿಸಿ ಮತಾಂತರ ಮಾಡಲಾಗುತ್ತಿದೆ. ಬೀದರ್ ಸೇರಿದಂತೆ ಬೇರೆ ಕಡೆ ನಾವು ಹೋದಾಗ ಈ ಬಗ್ಗೆ ನಮಗೂ ದೂರುಗಳು ಬಂದಿವೆ. ಹಾಗಾಗಿ ಗೃಹ ಮಂತ್ರಿಗಳು ಇದರ ಬಗ್ಗೆ ಕಠಿಣ ಕಾನೂನನ್ನು ಜಾರಿಗೆ ತರಬೇಕು ಎಂದು ಶೆಟ್ಟರ್ ಒತ್ತಾಯಿಸಿದರು.