ಹುಬ್ಬಳ್ಳಿ: ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವೀರಮರಣ ಹೊಂದಿದ ಯೋಧ ಮಂಜುನಾಥ ಓಲೇಕಾರ ಮನೆಯಲ್ಲಿ ದುಃಖ ಮಡುಗಟ್ಟಿದೆ. ಹುತಾತ್ಮನ ಕುಟುಂಬಕ್ಕೆ ಈವರೆಗೂ ಸರ್ಕಾರವಾಗಲಿ, ಜಿಲ್ಲಾಡಳಿವಾಗಲಿ ಅಧಿಕೃತ ಮಾಹಿತಿ ನೀಡದೇ ಇರುವುದು ಕುಟುಂಬಸ್ಥರನ್ನ ಮತ್ತಷ್ಟು ಕಂಗೆಡಿಸಿದೆ.
ಗಡಿಯಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಮಂಜುನಾಥ ಓಲೇಕಾರ ಪಾಲ್ಗೊಂಡಿದ್ದು, ಈ ವೇಳೆ ಗುಂಡೇಟು ತಗುಲಿ ತೀವ್ರ ಗಾಯವಾಗಿತ್ತು. ಕೂಡಲೇ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಯೋಧ ಮೃತಪಟ್ಟಿರುವ ಕುರಿತು ಇನಾಂ ವೀರಾಪುರದಲ್ಲಿನ ಆತನ ಮನೆಗೆ ಸೇನಾಧಿಕಾರಿ ಕಚೇರಿಯಿಂದ ದೂರವಾಣಿ ಕರೆ ಮಾಡಿ ಮಾಹಿತಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೂ ಈವರಿಗೆ ಯಾವುದೇ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳು ಭೇಟಿ ನೀಡಿಲ್ಲ. ಯೋಧ ಮೃತಪಟ್ಟಿರುವ ಕುರಿತು ಜಿಲ್ಲಾಧಿಕಾರಿಗಳು ಮಾಧ್ಯಮಕ್ಕೆ ಮಾಹಿತಿ ನೀಡಿದನ್ನು ಬಿಟ್ಟರೇ, ಜನಪ್ರತಿನಿಧಿಗಳು ಭೇಟಿ ನೀಡದಿರುವುದಕ್ಕೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ (ಗ್ರಾಮೀಣ) ತಹಶೀಲ್ದಾರ್ ಸಂಗಪ್ಪ ಬಾಡಗಿ ಅವರು ವಿಷಯ ತಿಳಿಯುತ್ತಿದ್ದಂತೆ ಯೋಧನ ಮನೆಗೆ ತೆರಳಿ ಸಾಂತ್ವನ ಹೇಳಿದ್ದಾರೆ. ಸುಮಾರು 10 ವರ್ಷದಿಂದ ಸೇನೆಯಲ್ಲಿರುವ ಮಂಜುನಾಥಗೆ 6ತಿಂಗಳ ಹಿಂದಷ್ಟೇ ವಿವಾಹವಾಗಿದ್ದ. ಯೋಧನ ತಂದೆ-ತಾಯಿ ರೈತರು. ಇನ್ನು, ಮಂಜುನಾಥ ಸಾವಿನ ವಿಷಯ ಕುಟುಂಬಕ್ಕೆ ಸಿಡಿಲು ಬಡಿದಂತಾಗಿದ್ದು, ಮನೆಯಲ್ಲಿ ನೀರವ ಮೌನ ಆವರಿಸಿದೆ.