ಹುಬ್ಬಳ್ಳಿ : ಪಶ್ಚಿಮ ರೈಲ್ವೆ ವತಿಯಿಂದ ಮುಂಬೈನಲ್ಲಿ ಇದೇ ತಿಂಗಳು 7 ರಿಂದ 10ರವರೆಗೆ 17ನೇ ಅಖಿಲ ಭಾರತ ರೈಲ್ವೆ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್ ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ನೈರುತ್ಯ ರೈಲ್ವೆಯು 1 ಚಿನ್ನ, 3 ಬೆಳ್ಳಿ ಮತ್ತು 2 ಕಂಚಿನ ಪದಕವನ್ನು ಗೆದ್ದು ಚಾಂಪಿಯನ್‌ಷಿಪ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದೆ.
ಹುಬ್ಬಳ್ಳಿ ವಿಭಾಗದಲ್ಲಿ ಜ್ಯೂನಿಯರ್ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮುದಾಸರ್ ಖಾನ್ ಮತ್ತು ಶ್ರೀರಾಜ್ ಪಿ.ಎಸ್ ಅವರು ಕ್ರಮವಾಗಿ 120 ಕಿ.ಗ್ರಾಂ ವಿಭಾಗದಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಮುಡಿಗೇರಿಸಿಕೊಂಡರು. ಹುಬ್ಬಳ್ಳಿ ವಿಭಾಗದಲ್ಲಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿರುವ ಅಭಿಷೇಕ್ ಹೆಚ್ ಹೊರಕೇರಿಯವರು 120 ಕಿ.ಗ್ರಾಂ.ಗೂ ಅಧಿಕ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದರು.
93 ಕಿ.ಗ್ರಾಂ ವಿಭಾಗದ ಸ್ಪರ್ಧೆಯಲ್ಲಿ ಹುಬ್ಬಳ್ಳಿ ವಿಭಾಗದಲ್ಲಿ ಜ್ಯೂನಿಯರ್ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದಿಲ್ಷಾದ್ ಅವರು ಚಿನ್ನವನ್ನು ಮತ್ತು ಹುಬ್ಬಳ್ಳಿ ವಿಭಾಗದಲ್ಲಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿರುವ ಎಳವರಸನ್ ಅವರು ಬೆಳ್ಳಿ ಪದಕ ಪಡೆದರು. ಹುಬ್ಬಳ್ಳಿ ವಿಭಾಗದಲ್ಲಿ ಜ್ಯೂನಿಯರ್ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಆರ್. ಅರುಣ್ ಸಾಯಿಕುಮಾರ್ ಅವರು 74 ಕಿ.ಗ್ರಾಂ. ವಿಭಾಗದಲ್ಲಿ ಕಂಚು ಜಯಿಸಿದರು. ಒಟ್ಟು 10 ಸದಸ್ಯರನ್ನು ಹೊಂದಿದ್ದ ನೈರುತ್ಯ ರೈಲ್ವೆ ತಂಡದಲ್ಲಿ 6 ಸದಸ್ಯರು ಪದಕ ವಿಜೇತರಾದರು.
ಈ ಚಾಂಪಿಯನ್‌ಷಿಪ್‌ನಲ್ಲಿ ಪಶ್ಚಿಮ ರೈಲ್ವೆಯು ಸಮಗ್ರವಾಗಿ ಮೊದಲ ಸ್ಥಾನವನ್ನು ಪಡೆದುಕೊಂಡಿತು. ನೈರುತ್ಯ ರೈಲ್ವೆಯು ದ್ವಿತೀಯ ಸ್ಥಾನ ಮತ್ತು ಮಧ್ಯ ರೈಲ್ವೆಯು ತೃತೀಯ ಸ್ಥಾನವನ್ನು ಪಡೆಯಿತು. ಕಳೆದ ಬಾರಿ ಪಂದ್ಯಾವಳಿಯಲ್ಲಿ 6ನೇ ಸ್ಥಾನ ಪಡೆದಿದ್ದ ನೈರುತ್ಯ ರೈಲ್ವೆಯು, ಈ ಬಾರಿ 2ನೇ ಸ್ಥಾನಕ್ಕೇರಿತು.
ನಿನ್ನೆ ರೈಲ್‌ಸೌಧದಲ್ಲಿ ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಸಂಜೀವ್ ಕಿಶೋರ್ ಅವರು ನೈರುತ್ಯ ರೈಲ್ವೆಯ ಪವರ್ ಲಿಫ್ಟಿಂಗ್ ತಂಡವನ್ನು ಅಭಿನಂದಿಸಿದರು. ತಂಡದ ಕಠಿಣ ಪರಿಶ್ರಮ ಮತ್ತು ದೃಢತೆ ಶ್ಲಾಘಿಸಿ, ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸಿದರು.