ಧಾರವಾಡ : ಮಹಾದಾಯಿ ಹೋರಾಟಗಾರರ ಮೇಲೆ ದಾಖಲಾಗಿದ್ದ ದೂರನ್ನು ಸರ್ಕಾರ ಮರಳಿ ಪಡೆದಿತ್ತು. ಆದ್ರೆ ಇದೀಗ ಕೆಲ ಹೋರಾಟಗಾರ ರೈತರಿಗೆ ಕೋರ್ಟ್ ಸಮನ್ಸ್ ಬಂದಿದೆ. ಕೇಸ್ ರದ್ದಾದರೂ ಸಮನ್ಸ್ ಹೇಗೆ ಬಂತು ಎಂದು ಶಾಸಕ ಎನ್. ಎಚ್. ಕೋನರೆಡ್ಡಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
mahadayi river dispute : ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾದಾಯಿ ಹೋರಾಟಗಾರರಿಗೆ ಸಮನ್ಸ್ ಜಾರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಹಾದಾಯಿಗಾಗಿ ರೈತರು ಹೋರಾಟ ಮಾಡಿದ್ದರು. ಆಗ ಹೋರಾಟಗಾರರ ಮೇಲೆ ಕೇಸು ದಾಖಲಾಗಿದ್ದವು. ಬಳಿಕ ರಾಜ್ಯ ಸರ್ಕಾರ ಕೇಸ್ ವಾಪಸ್ ಪಡೆದಿತ್ತು. ಈ ಬಗ್ಗೆ ಸರ್ಕಾರದಿಂದ ಆದೇಶವೂ ಆಗಿತ್ತು. ಅದನ್ನು ಕೋರ್ಟ್‌ಗೆ ಸಲ್ಲಿಸಲಾಗಿತ್ತು. ಆದ್ರೆ ಇದೀಗ ಅನೇಕ ರೈತರಿಗೆ ಸಮನ್ಸ್ ಬಂದಿವೆ. ಒಮ್ಮೆ ಕೇಸ್ ಮರಳಿ ಪಡೆದ ಮೇಲೆ ಸಮನ್ಸ್ ಬಂದಿದ್ದು ಹೇಗೆ? ಎಂದರು.
ಮಹಾದಾಯಿ ಹೋರಾಟಗಾರರಿಗೆ ಸಮನ್ಸ್ ಜಾರಿ : ಸರ್ಕಾರ ಯಾವುದೇ ಇರಲಿ ಕೇಸ್ ರೀ ಓಪನ್ ಮಾಡೋದು ಬೇಡ. ಕೇಸ್ ಕ್ಲೋಸ್ ಮಾಡಿಸಿದ್ದು ನಾನೇ. ಆದರೆ ಇದೀಗ ಸಮನ್ಸ್ ಬರುತ್ತಿವೆ ಅಂದರೆ ಹೇಗೆ? ಸಿಎಂ ಬೊಮ್ಮಾಯಿ ಕೂಡ ಮಹಾದಾಯಿಗಾಗಿ ಹೋರಾಟ ಮಾಡಿದವರು. ಕೂಡಲೇ ಈ ಬಗ್ಗೆ ಅವರು ಪರಿಶೀಲನೆ ಮಾಡಲಿ. ಒಂದು ವೇಳೆ ತಾಂತ್ರಿಕ ಸಮಸ್ಯೆಯಿದ್ದರೆ ಕೂಡಲೇ ಪರಿಹರಿಸಲಿ ಎಂದು ಆಗ್ರಹಿಸಿದರು.
ಆರಗ ಜ್ಞಾನೇಂದ್ರ ಪೊಲೀಸ್ ಕುರಿತ ಹೇಳಿಕೆಗೆ ಖಂಡನೆ : ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪೊಲೀಸರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಆ ರೀತಿ ಪೊಲೀಸರ ಬಗ್ಗೆ ಮಾತನಾಡಿರುವುದು ಖಂಡನೀಯ. ಅವರು ಆಡಿದ ಮಾತನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.