ಹುಬ್ಬಳ್ಳಿ: ಕರ್ತವ್ಯ ನಿರ್ವಹಿಸುವುದರ ಜೊತೆಗೆ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿ ಏಕಲವ್ಯ ಪ್ರಶಸ್ತಿ ಪಡೆದ ರೈಲ್ವೆ ಉದ್ಯೋಗಿಗಳಿಗೆ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್ ಸಿಂಗ್ ಸನ್ಮಾನಿಸಿದರು.
ಬ್ಯಾಸ್ಕೆಟ್ಬಾಲ್ ಕ್ರೀಡೆಯಲ್ಲಿ ಪ್ರಶಸ್ತಿ ಪಡೆದಿರುವ ಮಂಡ್ಯದ ಹೆಚ್.ಎಂ. ಬಾಂಧವ್ಯ 2018ರಲ್ಲಿ ಜಕಾರ್ತದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಇವರು 2016ರಿಂದ ರೈಲ್ವೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ. ಮೂರು ವರ್ಷಗಳಿಂದ ರೈಲ್ವೆಯಲ್ಲಿ ಕೆಲಸ ಮಾಡುತ್ತಿರುವ ಜಮಖಂಡಿ ತಾಲೂಕಿನ ಕುಳ್ಳೊಳ್ಳಿ ಗ್ರಾಮದ ಸೈಕ್ಲಿಸ್ಟ್ ಮೇಘಾ ಗೂಗಾಡ 2017ರಲ್ಲಿ ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. ಇವರು ಅದೇ ವರ್ಷ ಏಷ್ಯಾ ಕಪ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದ ಸೈಕ್ಲಿಸ್ಟ್ ವೆಂಕಪ್ಪ ಕೆಂಗಲಗುತ್ತಿ 2018ರಲ್ಲಿ ಸ್ವಿಟ್ಜರ್‌ಲೆಂಡ್‌ನಲ್ಲಿ ನಡೆದ ವಿಶ್ವ ಸೈಕ್ಲಿಂಗ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಇವರು 2019ರಲ್ಲಿ ರೈಲ್ವೆ ಇಲಾಖೆ ಸೇರಿಕೊಂಡ ವರ್ಷದಂದೇ ಜಕಾರ್ತದಲ್ಲಿ ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದರು.
ಎರಡು ವರ್ಷಗಳ ಹಿಂದೆ ರೈಲ್ವೆ ಇಲಾಖೆ ಸೇರಿಕೊಂಡಿದ್ದ ಬೀಳಗಿ ತಾಲೂಕಿನ ಟಕ್ಕಳಕಿ ಗ್ರಾಮದ ಸೈಕ್ಲಿಸ್ಟ್ ರಾಜು ಭಾಟಿ, 2018ರಲ್ಲಿ ಏಷ್ಯನ್ ಕ್ರೀಡಾಕೂಟ ಮತ್ತು ಅದೇ ವರ್ಷ ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. ಇವರಿಗೆಲ್ಲ ಈ ಸಲದ ಏಕಲವ್ಯ ಪ್ರಶಸ್ತಿ ಸಂದಿರುವುದು ರೈಲ್ವೆ ವಲಯದ ಕೀರ್ತಿಯನ್ನು ಇಮ್ಮಡಿಗೊಳಿಸಿದೆ.