ಹುಬ್ಬಳ್ಳಿ: ಸಿದ್ದರಾಮಯ್ಯ ಅಧಿಕಾರಲ್ಲಿದ್ದಾಗ ನಿದ್ದೆ ಮಾಡುತ್ತಿದ್ದರು. ಈಗ ಕನಸು ಕಾಣುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗಲೇ ಕನಸು ನನಸಾಗಲಿಲ್ಲ. ಈಗಲೂ ಅವರ ಕನಸು ನನಸಾಗೋದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದು ಮಧ್ಯಂತರ ಚುನಾವಣಾ ಹೇಳಿಕೆಗೆ ತಿರುಗೇಟು ನೀಡಿದರು. ಸಿದ್ದರಾಮಯ್ಯರ ಮಧ್ಯಂತರ ಚುನಾವಣಾ ಕನಸು ನನಸಾಗೋದಿಲ್ಲ. ನಿನ್ನೆ ಕೋರ್ ಕಮಿಟಿ ಸಭೆಗೆ ಆರ್.ಅಶೋಕ್, ಲಿಂಬಾವಳಿ ಕ್ಯಾಬಿನೆಟ್ ಹಾಗೂ ಇನ್ನಿತರ ಕೆಲಸಗಳ ಹಿನ್ನೆಲೆ ಗೈರಾಗಿದ್ದಾರೆ ಅಷ್ಟೇ. ನಮ್ಮಲ್ಲಿ ಯಾವುದೇ ಅಸಮಧಾನವಿಲ್ಲ ಎಂದು ಸ್ಪಷ್ಟಪಡಿಸಿದರು.
ಡಿಕೆಶಿ ಬಂಧನ ಮೂಲಕ ಬಿಜೆಪಿ ದ್ವೇಷದ ರಾಜಕಾರಣ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಕಟೀಲ್, ಸಿಬಿಐ, ಐಟಿ, ಇಡಿ, ಬಿಜೆಪಿ ನಿರ್ಮಾಣ ಮಾಡಿದ ಸಂಸ್ಥೆಗಳಲ್ಲ. ಅವರ ಮೇಲೆ ಆರೋಪವಿದೆ. ಕಾನೂನು ಹೋರಾಟ ಮಾಡಿ ಹೊರಬರಲಿ. ನರೇಂದ್ರ ಮೋದಿ, ಅಮಿತ್ ಶಾ ಕೂಡ ತಮ್ಮ ಮೇಲೆ ಆರೋಪ ಬಂದಾಗ ಕಾನೂನು ಹೋರಾಟ ಮಾಡಿ ಬಂದಿದ್ದಾರೆ. ಅದು ಕೂಡ ದ್ವೇಷದ ರಾಜಕಾರಣವೇ ಎಂದು ಪ್ರಶ್ನಿಸಿದರು.
ದಕ್ಷಿಣ ಕನ್ನಡ ಡಿಸಿ ಸಸಿಕಾಂತ್ ಸೆಂಥಿಲ್ ವೈಯುಕ್ತಿಕ ವಿಚಾರಕ್ಕೆ ರಾಜೀನಾಮೆ ನೀಡಿದ್ದಾರೆ. ಯಾವುದೇ ಉಹಾಪೋಹಗಳು ಬೇಡ. ಈ ಹಿಂದೆ ಮೈತ್ರಿ ಸರ್ಕಾರ ಇದ್ದಾಗ ಅಣಾಮಲೈ ಕೂಡಾ ರಾಜೀನಾಮೆ ನೀಡಿದ್ದರು. ಈಗ ರಾಜಕೀಯ ಮಾತನಾಡುತ್ತಿದ್ದಾರೆ. ಇವರು ಮುಂದೆ ಏನ್ ಮಾಡ್ತಾರೆ ನೋಡೋಣ ಎಂದರು.