ಹುಬ್ಬಳ್ಳಿ: ವಾಣಿಜ್ಯ ನಗರಿಯ ಪ್ರತಿಷ್ಠಿತ ಡಿಜಿಟಲ್ ಗಾರ್ಡನ್ ಹು-ಧಾ ಮಹಾನಗರ ಪಾಲಿಕೆ ನಿರ್ಲಕ್ಷ್ಯದಿಂದ ಪ್ರಾಬ್ಲಮ್ಸ್ ಗಾರ್ಡನ್ ಆಗಿದೆ. ಎಲ್ಲೆಂದರಲ್ಲಿ ಕೇಬಲ್ಗಳು ಹರಿದು ಬಿದ್ದು, ವೈಫೈ ಬಾಕ್ಸ್ಗಳು ಮೂಲೆಗುಂಪಾಗಿದ್ದು ಅವ್ಯವಸ್ಥೆಗೆ ಸಾಕ್ಷಿಯಾಗಿದೆ.
ನಗರದಲ್ಲಿ ಪ್ರಥಮ ಬಾರಿಗೆ ಕುಂಭಕೋಣಂ ಪ್ಲಾಟ್ ಬೈಲಪ್ಪನಗರದಲ್ಲಿ ಡಿಜಿಟಲ್ ಗಾರ್ಡನ್ ಮಾಡಲಾಗಿತ್ತು. ಗಾರ್ಡನ್ನಲ್ಲಿ ವೈಫೈ, ಮೊಬೈಲ್ ಚಾರ್ಜರ್, ಇಂಟರ್ನೆಟ್ ಸೌಲಭ್ಯ ನೀಡಲಾಗಿತ್ತು. ಅಲ್ಲದೇ ಇಲ್ಲಿ ಬರುವ ವಾಯು ವಿಹಾರಿಗಳಿಗೆ ಡಿಜಿಟಲ್ ಸೇವೆಯನ್ನು ನೀಡಲಾಗುತ್ತಿತ್ತು. ಆದರೆ ಈಗ ಆ ಎಲ್ಲಾ ಸೌಲಭ್ಯಗಳು ನಿಂತಿವೆ.
ಸೂಕ್ತ ನಿರ್ವಹಣೆ ಇಲ್ಲದ ಕಾರಣ ಸೋಲಾರ್ ವ್ಯವಸ್ಥೆ ಕೂಡ ಹಾಳಾಗಿದೆ. ಜೊತೆಗೆ ಎಲ್ಲಾ ಸೌಲಭ್ಯಗಳು ಸ್ಥಗಿತಗೊಂಡಿವೆ. ಪಾಲಿಕೆಯಿಂದ ಲಕ್ಷಾಂತರ ರೂ. ವ್ಯಯ ಮಾಡಿ ನಿರ್ಮಾಣ ಮಾಡಿದ್ದ ಡಿಜಿಟಲ್ ಗಾರ್ಡನ್ ಸದ್ಯ ಪಾಳು ಬಿದ್ದಿದೆ.
ಇಷ್ಟು ಅವ್ಯವಸ್ಥೆ ತಾಂಡವವಾಡುತ್ತಿದ್ದರೂ ಕೂಡ ಪಾಲಿಕೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಎನ್ನಲಾಗಿದೆ.