ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಗದ್ದುಗೆ ಏರಲು ಹೊರಟ ಬಿಜೆಪಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಉಪಮೇಯರ್ ಸ್ಥಾನ ಪಡೆಯಲು ಹೆಣಗಾಡುವ ಸ್ಥಿತಿ ಎದುರಾಗಿದೆ.
ಮಹಾನಗರ ಪಾಲಿಕೆ ಪಡೆಯಲು ಪರದಾಡುತ್ತಿರುವ ಬಿಜೆಪಿ ಬಳಿ ಉಪ ಮೇಯರ್ ಅಭ್ಯರ್ಥಿಯೇ ಇಲ್ಲವಾಗಿದೆ. ಉಪಮೇಯರ್ ಸ್ಥಾನ ಎಸ್‌ಸಿ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿಯಲ್ಲಿ ಚುನಾಯಿತ ಎಸ್‌ಸಿ ಮಹಿಳಾ ಅಭ್ಯರ್ಥಿಯೇ ಇಲ್ಲದಿರುವುದು ತಲೆನೋವಾಗಿ ಪರಿಣಮಿಸಿದೆ.
ಬಿಜೆಪಿಯಿಂದ ಗೆದ್ದಿರುವ 39 ಸದಸ್ಯರಲ್ಲಿ ಒಬ್ಬರೂ ಕೂಡ ಎಸ್‌ಸಿ ಮಹಿಳಾ ಅಭ್ಯರ್ಥಿಗಳಿಲ್ಲ. ಹೀಗಾಗಿ ಹೊಸದೊಂದು ತಲೆನೋವು ಸೃಷ್ಠಿಯಾಗಿದ್ದು, 6 ಜನ ಜನಪ್ರತಿನಿಧಿಗಳ ಮತಗಳಿಂದ ಅಧಿಕಾರದಿಂದ ಗದ್ದುಗೆ ಹಿಡಿಯಲು ಹೊರಟಿದ್ದ ಬಿಜೆಪಿ ಉಪಮೇಯರ್ ಅಭ್ಯರ್ಥಿಗಳೇ ಇಲ್ಲವಾಗಿದೆ.
ಸದ್ಯ ಮಹಿಳಾ ಅಭ್ಯರ್ಥಿ ಇಲ್ಲದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಂಡಾಯ ಅಥವಾ ಪಕ್ಷೇತರ ಅಭ್ಯರ್ಥಿ ಮೊರೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಎಸ್‌ಸಿ ಮಹಿಳಾ ಮೀಸಲು ಕ್ಷೇತ್ರದಿಂದ ಇಬ್ಬರು ಪಕ್ಷೇತರ ಮಹಿಳಾ ಅಭ್ಯರ್ಥಿಗಳು ಜಯ ಸಾಧಿಸಿದ್ದು, ಅವರ ಬೆಂಬಲ ತೆಗೆದುಕೊಳ್ಳಬೇಕಾಗಿದೆ. ಅಲ್ಲದೇ ಉಪಮೇಯರ್ ಸ್ಥಾನ ಬಿಟ್ಟುಕೊಡಬೇಕಾದ ಅನಿವಾರ್ಯತೆಗೆ ಬಿಜೆಪಿ ನಾಯಕರು ಸಿಲುಕಿದ್ದಾರೆ.
ಆದರೆ ಮೀಸಲು ಕ್ಷೇತ್ರದಿಂದ ಗೆದ್ದ ಇಬ್ಬರನ್ನೂ ಕಾಂಗ್ರೆಸ್ ಸೆಳೆದರೆ ಕಮಲಪಡೆಗೆ ಹೊಸದೊಂದು ತಲೆನೋವು ಸೃಷ್ಟಿಯಾಗುವುದಂತೂ ಸತ್ಯ. ಸರಳವಾಗಿ ಗದ್ದುಗೆ ಏರಲು ಹೊರಟ ಬಿಜೆಪಿಗೆ ದಿನಕ್ಕೊಂದು ವಿಘ್ನ ಎದುರಾಗಿದ್ದು, ಇಬ್ಬರೂ ಮಹಿಳೆಯರನ್ನು ಹೇಗೆ ತನ್ನತ್ತ ಸೆಳೆಯಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ.
ಇದನ್ನೂ ಓದಿ: ಸ್ಯಾಂಡಲ್ವುಡ್ನಲ್ಲಿ ಪಾರ್ಟಿಗಳು ನಡೀತಾನೇ ಇವೆ: ನಿರ್ದೇಶಕ ಇಂದ್ರಜಿತ್ ಲಂಕೇಶ್