ಹುಬ್ಬಳ್ಳಿ: ಕೊರೊನಾ ಲಾಕ್ಡೌನ್ ಅವಧಿಯಲ್ಲಿ ಹೊರ ರಾಜ್ಯಗಳಿಂದ ಆಗಮಿಸುವವರು ಹೋಟೆಲ್ನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಇರಲು ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.
ಜನರಲ್ಲಿ ಯಾವುದೇ ರೋಗ ಲಕ್ಷಣ ಹೊಂದಿಲ್ಲದಿರುವವರನ್ನು ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಪಡಿಸುವುದು ಕಡ್ಡಾಯವಾಗಿದೆ. ಸರ್ಕಾರದ ಶಾಲೆ, ಹಾಸ್ಟೆಲ್ ಮತ್ತಿತರ ಕಟ್ಟಡಗಳಲ್ಲಿ ಸರ್ಕಾರಿ ಕ್ವಾರಂಟೈನ್ ಒದಗಿಸಲಾಗುತ್ತಿದ್ದು, ಸ್ವಂತ ವೆಚ್ಚ ಭರಿಸಲು ಸಿದ್ಧ ಇರುವವರು ಹೋಟೆಲ್ ಕ್ವಾರಂಟೈನ್ ಆಯ್ದುಕೊಳ್ಳಬಹುದು. ಇದಕ್ಕಾಗಿ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಇರುವ ವಿವಿಧ ಹೋಟೆಲ್ಗಳಿಗೆ ಸಾಮಾನ್ಯ ದರಗಳನ್ನು ನಿಗದಿಗೊಳಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗೆ ಧಾರವಾಡದಲ್ಲಿ ನಡೆದ ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳೊಂದಿಗಿನ ಸಭೆಯಲ್ಲಿ ಚರ್ಚಿಸಿ ಈ ದರಗಳನ್ನು ಕ್ವಾರಂಟೈನ್ ಸೌಲಭ್ಯಕ್ಕೆ ನಿಗದಿಗೊಳಿಸಲಾಗಿದೆ. ನಾನ್ ಎ.ಸಿ. ಕೊಠಡಿಗಳಲ್ಲಿ ಒಬ್ಬರಿಗೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಸೇರಿ ದಿನವೊಂದಕ್ಕೆ 700 ರೂಪಾಯಿಗಳನ್ನು ನಿಗದಿ ಮಾಡಲಾಗಿದೆ.
ಇಬ್ಬರು ಶೇರಿಂಗ್ ಆಧಾರದಲ್ಲಿ ಒಂದೇ ಕೊಠಡಿಯಲ್ಲಿ ಇದ್ದರೆ 1,000 ರೂಪಾಯಿ ಹಾಗೂ ಎ.ಸಿ.ಕೊಠಡಿಯಲ್ಲಿ ಶೇರಿಂಗ್ ಆಧಾರದಲ್ಲಿ ಇಬ್ಬರಿಗೆ ದಿನವೊಂದಕ್ಕೆ 1,500 ರೂಪಾಯಿ ನಿಗದಿ ಪಡಿಸಲಾಗಿದೆ.
ಕಡಿಮೆ ದರದ ಹೋಟೆಲ್‍ಗಳು: ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಸೇರಿ ದಿನವೊಂದಕ್ಕೆ ಒಬ್ಬರಿಗೆ 500 ರೂ. ಹಾಗೂ ಇಬ್ಬರಿಗೆ ಶೇರಿಂಗ್ ಆಧಾರದಲ್ಲಿ 700 ರೂಪಾಯಿಗಳ ದರ ನಿಗದಿ ಪಡಿಸಲಾಗಿದೆ. ಹೋಟೆಲ್‍ಗಳ ಮಾಲೀಕರು ತಮ್ಮ ಹೋಟೆಲ್ ವಿಳಾಸ, ಲಭ್ಯ ಇರುವ ಕೊಠಡಿಗಳ ವರ್ಗಿಕರಣ ಮುಂತಾದವುಗಳ ಮಾಹಿತಿ ಮತ್ತು ತಮ್ಮ ಹೋಟೆಲ್‍ಗಳಲ್ಲಿ ಕ್ವಾರಂಟೈನ್ ಅಡಿ ತಂಗುವವರ ಕುರಿತು ಪೂರ್ಣ ವಿವರಗಳನ್ನು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಗೆ ಒದಗಿಸಬೇಕು ಎಂದು ಸೂಚಿಸಲಾಗಿದೆ.