ಧಾರವಾಡ: ಕೊರೊನಾ ಹಾವಳಿಯಿಂದ ಪ್ರಸ್ತುತ ಹೆಚ್ಚಿನ ಕ್ಷೇತ್ರಗಳು ಆನ್ಲೈನ್ಮಯವಾಗಿವೆ. ಧಾರವಾಡ ಹೈಕೋರ್ಟ್ ಸಹ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ.
ಬೆಂಗಳೂರಿನ ಹೈಕೋರ್ಟ್ ಕಾರ್ಯ ಕಲಾಪಗಳೆಲ್ಲ ಆನ್‌ಲೈನ್ ಮೋಡ್ನಲ್ಲಿದ್ದು ಇದಕ್ಕೆ ಪೂರಕವೆಂಬಂತೆ ಧಾರವಾಡ ಹೈಕೋರ್ಟ್ ಕೂಡಾ ಆನ್‌ಲೈನ್ ಮೋಡ್‌ನತ್ತ ಹಂತ ಹಂತವಾಗಿ ಅಪ್ಡೇಟ್ ಆಗುತ್ತಿದೆ.
ಬೆಂಗಳೂರು ಹೈಕೋರ್ಟ್ ಮಾದರಿಯಲ್ಲಿ ಧಾರವಾಡ ಹೈಕೋರ್ಟ್‌ನಲ್ಲಿ ಟೆಲಿಗ್ರಾಂ ಚಾನೆಲ್ ಮೂಲಕ ಕಲಾಪಗಳಲ್ಲಿ ಭಾಗವಹಿಸುವಿಕೆಯಿಂದ ಹಿಡಿದು, ಹೊಸ ವೆಬ್‌ಸೈಟ್, ಮಾಹಿತಿ ಲಭ್ಯ ಇರುವ ತಂತ್ರಾಂಶಗಳ ಪರಿಚಯ ಹಾಗೂ ಅವುಗಳ ಬಳಕೆ ಕುರಿತು ಹೈಕೋರ್ಟ್ ಪೀಠದ ವಕೀಲರ ಸಂಘದಿಂದ ವಕೀಲರಿಗಾಗಿ ಇಂದು ವಿಶೇಷ ಕಾರ್ಯಾಗಾರ ಏರ್ಪಡಿಸಿ ತರಬೇತಿ ನೀಡಿತು.
ಧಾರವಾಡ ಹೈಕೋರ್ಟ್ ನ್ಯಾಯಮೂರ್ತಿಗಳು ಸಹ ಭಾಗವಹಿಸಿ ವಕೀಲರಿಗೆ ಮಾರ್ಗದರ್ಶನ ನೀಡಿದ್ದಾರೆ. ಕಾರ್ಯಾಗಾರದಲ್ಲಿ ನ್ಯಾ.ಸೂರಜ್ ಗೋವಿಂದರಾಜ್, ತಂತ್ರಾಂಶಗಳ ಬಳಕೆ ಬಗ್ಗೆ ವಕೀಲರಿಗೆ ಪ್ರಾತ್ಯಕ್ಷಿಕೆ ನೀಡಿದರು.
ಇದನ್ನೂ ಓದಿ: ಡೆಲ್ಟಾಗಿಂತ ವೇಗವಾಗಿ ಹರಡುವ AY 4.2 ಸೋಂಕು ಎಂಟ್ರಿ: ರಂದೀಪ್ ಹೇಳಿದ್ದೇನು?
ಬೆಂಗಳೂರಿನಲ್ಲಿರುವ ರಾಜ್ಯ ಹೈಕೋರ್ಟ್‌ನಲ್ಲಿ ಈಗಾಗಲೇ ಈ ತಂತ್ರಾಂಶವನ್ನು ಬಳಸಿ ನ್ಯಾಯವಾದಿಗಳು ಹೈಕೋರ್ಟ್ ಕಲಾಪದಲ್ಲಿ ಯಶಸ್ವಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. ಧಾರವಾಡ ಹೈಕೋರ್ಟ್ ಪೀಠದಲ್ಲಿ ಸಹ ಈ ಸೌಲಭ್ಯಗಳು ಈಗ ಹಂತ ಹಂತವಾಗಿ ಬರಲಿವೆ. ಇದರಿಂದ ವಕೀಲರಿಗೆ ಮಾತ್ರವಲ್ಲ, ಕಕ್ಷಿದಾರರಿಗೂ ಸಹ ಸಾಕಷ್ಟು ಅನುಕೂಲವಾಗಲಿದೆ.
ತಮ್ಮ ಪ್ರಕರಣದ ಲೈವ್ ಅಪ್ಡೇಟ್ಸ್ ಅನ್ನು ಬಹಳ ಸಲೀಸಾಗಿ ತಿಳಿದುಕೊಳ್ಳಬಹುದಾಗಿದೆ. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಧಾರವಾಡ ಹೈಕೋರ್ಟ್ಗೆ ಕಕ್ಷಿದಾರರು ಮತ್ತು ವಕೀಲರು ತಮ್ಮ ಕೇಸ್ ಇದ್ದಾಗ ಅಲೆದಾಡಬೇಕಾಗುತ್ತದೆ. ಆದ್ರೆ ಆನ್‌ಲೈನ್ ಮೋಡ್ ಅಪ್ಡೇಟ್ ಆಗುತ್ತಾ ಹೋದಂತೆ, ವಕೀಲರು ಆನ್‌ಲೈನ್ ಕಲಾಪಗಳಲ್ಲಿ ವಾದ ಸಹ ಮಂಡಿಸಬಹುದು. ಇದು ತುಂಬಾನೇ ಅನುಕೂಲಕರ ಎಂಬುದು ವಕೀಲರ ಅಭಿಪ್ರಾಯ.