ಹುಬ್ಬಳ್ಳಿ: ನಿಂತಿದ್ದ ಲಾರಿ ಕಾರು ಡಿಕ್ಕಿಯಾಗಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿ, ನಾಲ್ಕು ಜನರು ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿ ಸಮೀಪದ ಅದರಗುಂಚಿ ಕ್ರಾಸ್ ಬಳಿ ನಡೆದಿದೆ.
ರಸ್ತೆ ಪಕ್ಕ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು ತಮಿಳುನಾಡು ಮೂಲದ ಅಯ್ಯನಾರ್(35) ಎಂದು ಗುರುತಿಸಲಾಗಿದೆ. ಅಪಘಾತ ನಡೆದ ಸ್ಥಳದಲ್ಲಿದ್ದ ಜನರು ನಾಲ್ಕು ಮಂದಿಯ ಪ್ರಾಣ ಉಳಿಸಿದ್ದಾರೆ.
ಕಾರಿನ ಗ್ಲಾಸ್ ಒಡೆದು ಕಾರಿನಲ್ಲಿದ್ದವರ ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ನಾಲ್ಕು ಜನರನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಕಾರಿನಲ್ಲಿದ್ದವರು ತಮಿಳುನಾಡು ಮೂಲದವರಾಗಿದ್ದು, ಸೇಲಂನಿಂದ ಮುಂಬೈಗೆ ತೆರಳುತ್ತಿದ್ದರು. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.