ಹುಬ್ಬಳ್ಳಿ: ತಿರುಪತಿ ದೇವಸ್ಥಾನದ ಆಸ್ತಿ ಮಾರಾಟ ಮಾಡುವ ನಿರ್ಧಾರಕ್ಕೆ ತಡೆಯಾಜ್ಞೆ ನೀಡಿ ಭಕ್ತರ ಅಭಿಪ್ರಾಯ ಸಂಗ್ರಹಕ್ಕೆ ಆಂಧ್ರಪ್ರದೇಶ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರೇತರ ಸಮಿತಿ ರಚಿಸಲು ಆಗ್ರಹಿಸಿ ಶ್ರೀರಾಮ ಸೇನಾ ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು..
ಆಂಧ್ರಪ್ರದೇಶ ಸರ್ಕಾರದ ಅಧೀನದಲ್ಲಿರುವ ಟಿಟಿಡಿ ಮಂಡಳಿಯು ಜಗತ್ಪ್ರಸಿದ್ಧ ತಿರುಪತಿ ದೇವಸ್ಥಾನಕ್ಕೆ ಭಕ್ತರು ದಾನ ನೀಡಿದ 50ಕ್ಕೂ ಹೆಚ್ಚು ಆಸ್ತಿಗಳನ್ನು ಮಾರಾಟ ಮಾಡಲು ಮುಂದಾಗಿರುವುದು ಖಂಡನೀಯವಾಗಿದೆ. ಇದು ಹಿಂದೂ ಧರ್ಮಕ್ಕೆ ಮಾಡಿರುವ ದ್ರೋಹವಾಗಿದೆ ಎಂದು ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಈಗ ಭಕ್ತರು ಸಾಧುಸಂತರ ಅಭಿಪ್ರಾಯಕ್ಕೆ ಮುಂದಾಗಿದೆ. ಕೂಡಲೇ ಆಂಧ್ರಪ್ರದೇಶ ಸರ್ಕಾರ ಈ ಸಂಬಂಧ ಸರ್ಕಾರೇತರ ಸಮಿತಿ ರಚನೆ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಶ್ರೀರಾಮ ಸೇನೆ ಒತ್ತಾಯಿಸಿದೆ.