ಹುಬ್ಬಳ್ಳಿ: ಹುಬ್ಬಳ್ಳಿ ನನ್ನ ಪ್ರೀತಿಯ ಊರು. ನನ್ನ ಎಲ್ಲ ಶಿಕ್ಷಣ ಇಲ್ಲಿಯೇ ಮುಗಿದಿದೆ. ಮುಖ್ಯಮಂತ್ರಿಯಾಗಿ ನಾನು ಹುಬ್ಬಳ್ಳಿಗೆ ಬರುತ್ತೇನೆ ಅಂದುಕೊಂಡಿರಲಿಲ್ಲ. ರಾಜ್ಯದ ಎರಡನೇ ಅತಿದೊಡ್ಡ ನಗರ ಹುಬ್ಬಳ್ಳಿ-ಧಾರವಾಡವನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಕಾರ್ಯವನ್ನು ಮಾಡುತ್ತೇನೆ ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ವೇಳೆ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ್ದೇನೆ. ಹುಬ್ಬಳ್ಳಿ-ಧಾರವಾಡದ ಸರ್ವಾಂಗೀಣ ಅಭಿವೃದ್ಧಿ ಶ್ರಮಿಸುತ್ತೇನೆ. ಅವಳಿನಗರ ಅಭಿವೃದ್ಧಿ ವಿಚಾರದಲ್ಲಿ ಹಾಗೂ ಇಲ್ಲಿನ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಜಗದೀಶ್ ಶೆಟ್ಟರ್ ಸಂಪುಟ ಸೇರುವುದಿಲ್ಲ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಜಗದೀಶ್ ಶೆಟ್ಟರ್ ಜೊತೆ ಫೋನ್ನಲ್ಲಿ ಮಾತನಾಡಿದ್ದೇನೆ. ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಅವರನ್ನು ಖುದ್ದಾಗಿ ಭೇಟಿಯಾಗಿ ಮಾತನಾಡುವೆ. ಜಗದೀಶ್ ಶೆಟ್ಟರ್ ಮತ್ತು ನಾನು ಆತ್ಮೀಯ ಸ್ನೇಹಿತರು, ಬೇರೆ ಪಕ್ಷದಲ್ಲಿ ಇದ್ದಾಗಲೂ ಉತ್ತಮ ಬಾಂಧವ್ಯ ಇತ್ತು. ನಾವು ಆಗಿನ್ನೂ ರಾಜಕೀಯಕ್ಕೆ ಬಂದಿರಲಿಲ್ಲ. ಆಗಿನಿಂದಲೂ ಒಳ್ಳೆಯ ಸ್ನೇಹಿತರು ಎಂದು ಹೇಳಿದರು.
ಸಚಿವ ಸಂಪುಟದ ರಚನೆಯ ಬಗ್ಗೆ ಮಾತನಾಡಿದ ಅವರು, ನಾಳೆ ನಾನು ದೆಹಲಿಗೆ ಹೊರಟಿದ್ದೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚೆ ಮಾಡುತ್ತೇನೆ. ಮೊದಲ ಬಾರಿಗೆ ಹೋಗುತ್ತಿದ್ದೇನೆ. ಅವರ ಆಶೀರ್ವಾದ ಪಡೆದು ಬಳಿಕ ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆ ಮಾಡುತ್ತೇನೆ. ಮೂರು ನಾಲ್ಕು ದಿನಗಳಲ್ಲಿ ಸಚಿವ ಸಂಪುಟ ರಚನೆ ಮಾಡಲಾಗುತ್ತದೆ. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಇದನ್ನೂ ಓದಿ: ಈಗಲೂ ಯಡಿಯೂರಪ್ಪ ಅವರೇ ನಮ್ಮ ನಾಯಕ, ಸಿಎಂ ಮನೆಗೆ ಭೇಟಿ ನೀಡುವುದರಲ್ಲಿ ತಪ್ಪೇನಿಲ್ಲ: ರೇಣುಕಾಚಾರ್ಯ