ಹುಬ್ಬಳ್ಳಿ: ಸರಿಯಾದ ಮಾಹಿತಿ ಇಟ್ಟುಕೊಂಡು ಅಧಿಕಾರಿಗಳು ಮಾತನಾಡಬೇಕು. ಮಾಹಿತಿ ಕೊರತೆ ಇರಬಾರದು, ನನಗೆ ಎಲ್ಲಾ ಇಲಾಖೆ ಬಗ್ಗೆಯೂ ಗೊತ್ತು. ಅಧಿಕಾರಿಗಳು ಫಲಾನುಭವಿಗಳ ಅಂಕಿ-ಸಂಖ್ಯೆ ಸಹಿತ ಮಾಹಿತಿ ಕೊಡಬೇಕು ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಸರಿಯಾದ ಮಾಹಿತಿ ಇಟ್ಟುಕೊಂಡು ಮಾತನಾಡಬೇಕು. ಅಲ್ಲದೇ ಸಾರ್ವಜನಿಕರಿಗೆ ಹಾರಿಕೆ ಉತ್ತರ ನೀಡುವಂತದ್ದು, ಮಾಹಿತಿ ನೀಡುವುದನ್ನು ಬಿಟ್ಟು ಜವಾಬ್ದಾರಿಯನ್ನು ತಳ್ಳಿ ಹಾಕುವ ಕೆಲಸ ಗಮನಕ್ಕೆ ಬಂದರೆ ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಬರಗಾಲದ ಹಿನ್ನೆಲೆಯಲ್ಲಿ 200 ಕಿಲೋ ಮೀಟರ್ ದೂರದಿಂದ ಮೇವು ತರುತ್ತಿರುವುದಕ್ಕೆ ತೀವ್ರ ಅಸಮದಾನ ವ್ಯಕ್ತಪಡಿಸಿದ ಸಚಿವರು, ಸ್ಥಳೀಯವಾಗಿ ಮೇವು ಬೆಳೆಸಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು. ಇನ್ನು ಕುಂದಗೋಳವನ್ನ ಗುಡಿಸಲು ಮುಕ್ತ ಕ್ಷೇತ್ರವನ್ನಾಗಿ ಮಾಡಬೇಕು, ಅರ್ಹರಿಗೆ ಪಿಂಚಣಿ ಸಿಗಬೇಕು. ನಿಮ್ಮ ಕಾರ್ಯ ವೈಖರಿ ಬಗೆಗಿನ ಮಾಹಿತಿಯನ್ನು ವಾಟ್ಸ್ಯಾಪ್ ಗ್ರುಪ್ವೊಂದನ್ನು ಮಾಡಿ ಅದರಲ್ಲಿ ನನಗೆ ತಿಳಿಸಬೇಕು. 2 ತಿಂಗಳ ಕಾಲಾವಕಾಶ ನೀಡುತ್ತೇನೆ. ಅಷ್ಟರೊಳಗೆ ಎಲ್ಲವೂ ಸರಿಯಾಗಿರಬೇಕು ಎಂದು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟರು.
ನಾನು ಮೊದಲು ಜಿಲ್ಲಾ ಪಂಚಾಯತ್ ಸದಸ್ಯನಾಗಿಯೇ ಕೆಲಸ ಮಾಡಿ ಇಂದು ಸಚಿವನಾಗಿದ್ದೇನೆ. ಯಾವ ಅಧಿಕಾರಿಗಳಿಗೂ ಮಾಹಿತಿ ಕೊರತೆ ಇರಬಾರದು. ಇಲ್ಲಿ ಹಾರ, ಜೈಕಾರ ಹಾಕಿಸಿಕೊಂಡು ಊಟ ಮಾಡಿ ಹೋಗೋಕೆ ಬಂದಿಲ್ಲಾ. ಎಚ್ಚರಿಕೆಯಿಂದ ಮಾಹಿತಿ ಕೊಡಿ, ಮಾಧ್ಯಮದವರು ಇದ್ದಾರೆ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಸಚಿವರಾದ ಯು.ಟಿ. ಖಾದರ್, ಎಂಟಿಬಿ ನಾಗರಾಜ, ಜಯಮಾಲಾ ಉಪಸ್ಥಿತರಿದ್ದರು.