ಧಾರವಾಡ: ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಗಂಗಾಧರ ಬಡಿಗೇರ ಧಾರವಾಡದ ಹಳೇ ಬಸ್‌ನಿಲ್ದಾಣದಲ್ಲಿ ಮತಯಾಚನೆ ಮಾಡಿದರು.
ನಿರುದ್ಯೋಗ, ಬಡತನ, ಹಸಿವು, ಶಿಕ್ಷಣ ವ್ಯಾಪಾರೀಕರಣ, ಕುಡಿಯುವ ನೀರಿನ ಖಾಸಗೀಕರಣ ಹಾಗೂ ಇನ್ನಿತರ ಮೂಲಭೂತ ಸಮಸ್ಯೆಗಳನ್ನು ಹೋಗಲಾಡಿಸಲು ಕಮ್ಯುನಿಸ್ಟ್ ಪಕ್ಷವನ್ನು ಬೆಂಬಲಿಸಬೇಕು ಎಂದು ಎಸ್‌ಯುಸಿಐ (ಸಿ) ಪಕ್ಷದ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗಂಗಾಧರ ಬಡಿಗೇರ ಮತದಾರರಲ್ಲಿ ಮನವಿ ಮಾಡಿದರು.
ಜನರಿಂದ ಆರಿಸಿ ಬರುವ ನಾಯಕರು ಜನರ ಪರವಾಗಿ ಕೆಲಸ ಮಾಡದೇ ಭಷ್ಟ ರಾಜಕೀಯ ಪಕ್ಷಗಳ ಉದ್ಧಾರಕ್ಕೆ ಶ್ರಮ ಪಡುತ್ತಿವೆ. ನಮಗೆ ಇಂತಹ ಜನ ನಾಯಕರು ಬೇಡ. ಇಂತಹ ವ್ಯವಸ್ಥೆಯ ಬದಲಾವಣೆಗಾಗಿ ಕಮ್ಯುನಿಸ್ಟ್ ಪಕ್ಷಕ್ಕೆ ನಿಮ್ಮ ಮತ ಹಾಕಿ ಎಂದು ಧಾರವಾಡದ ಹಳೇ ಬಸ್‌ನಿಲ್ದಾಣದಲ್ಲಿ ಹೋಗುವ, ಬರುವ ಜನರಿಗೆ ಕರಪತ್ರ ಮತ್ತು ಹಾಡು ಹಾಡುವ ಮೂಲಕ ಮತಯಾಚನೆ ಮಾಡಿದರು.
ಬಂಡವಾಳಶಾಹಿಗಳು ಇಂದು ದೇಶವನ್ನು ಲೂಟಿ ಮಾಡುತ್ತಿದ್ದಾರೆ. ಲೂಟಿಯ ಹಗರಣಗಳು ಬಯಲಿಗೆ ಬರದಂತೆ ಇರಲು ಅವುಗಳಿಗೆ ಅಭಿವೃದ್ಧಿಯ ಹೆಸರಿಡುತ್ತಿದ್ದಾರೆ. ಇದು ಮುಗ್ಧ ಜನರಿಗೆ ತಿಳಿಯುತ್ತಿಲ್ಲ ಎಂದರು. ಧಾರವಾಡದ ಹಳೇ ಬಸ್‌ನಿಲ್ದಾಣ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಪಕ್ಷದ ಕಾರ್ಯಕರ್ತರು ಚುನಾವಣಾ ಪ್ರಚಾರ ಮಾಡಿದರು.