ಹುಬ್ಬಳ್ಳಿ: ನಗರದ ಕಿಮ್ಸ್ ಆಸ್ಪತ್ರೆ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ಮೃತಪಟ್ಟ ವ್ಯಕ್ತಿಗೆ ಕೊರೊನಾ ಸೋಂಕು ಇದೆ ಎಂದು ಸರ್ಕಾರದ ನಿರ್ದೇಶನದಂತೆ ಅಂತ್ಯಸಂಸ್ಕಾರ ಮಾಡಿದೆ. ಆದ್ರೆ ಈಗ ಮೃತಪಟ್ಟ ವ್ಯಕ್ತಿಗೆ ಕೊರೊನಾ ಸೋಂಕು ಇಲ್ಲ ಎಂಬ ವರದಿ ಬಂದಿದ್ದು, ಕಿಮ್ಸ್ ವೈದ್ಯರ ವಿರುದ್ದ ಕ್ರಮಕ್ಕೆ ಅಮನ್ ಫೌಂಡೇಷನ್ ಒತ್ತಾಯಿಸಿದೆ.
ಘಟನೆ ಹಿನ್ನೆಲೆ:
ಹಳೆ ಹುಬ್ಬಳ್ಳಿಯ ಜನ್ನತ್ ನಗರ ನಿವಾಸಿ ಹಜರತ್ ಸಾಬ್ ಮಹಬೂಬಸಾಬ್ ಪಟ್ಟಣಕಾರಿ (62) ಎಂಬ ವ್ಯಕ್ತಿಯು, ಜೂನ್ 30ರಂದು ತೀವ್ರ ಜ್ವರದಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ರಕ್ತ ತಪಾಸಣೆಗೆ ಒಳಪಡಿಸಿದಾಗ ಇವರಿಗೆ ವೈಟ್ ಪ್ಲೇಟ್ಲೆಟ್ಸ್ ಕಡಿಮೆ ಇದೆ ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಆ ಕುಟುಂಬದ ಸದಸ್ಯರು ಅದೇ ದಿನ ಸಂಜೆ ವ್ಯಕ್ತಿಯನ್ನು ಕಿಮ್ಸ್ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.
ಕಿಮ್ಸ್ನಲ್ಲಿ ಚಿಕಿತ್ಸೆ ನೀಡುವಾಗ ಅಲ್ಲಿಯ ವೈದ್ಯರು ಆ ರೋಗಿಯನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದಾರೆ. ನಂತರ ಸ್ವಲ್ಪ ಹೊತ್ತಿನಲ್ಲೇ, ಆ ರೋಗಿಯ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಅಲ್ಲದೆ ಕೋವಿಡ್-19 ಸೋಂಕಿನ ಲಕ್ಷಣ ಇರುವುದು ಕಂಡು ಬಂದಿದೆ ಎಂದು ಹೇಳಿದ್ದಾರೆ. ನಂತರ ಕೆಲವೇ ನಿಮಿಷಗಳಲ್ಲಿ ಕೊರೊನಾ ಪಾಸಿಟಿವ್ ಇದ್ದಿದ್ದರಿಂದ, ರೋಗಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ತಿಳಿಸಿದ್ದಾರೆ.
ಮೃತನ ಶವವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸದೆ ಕೋವಿಡ್ ಪಾಸಿಟಿವ್ನಿಂದ ಮೃತಪಟ್ಟ ದೇಹವನ್ನು ಜಿಲ್ಲಾಡಳಿತದ ನಿರ್ದೇಶನದಂತೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಮರುದಿನ ಜಿಲ್ಲಾಡಳಿತದಿಂದ ಸರ್ಕಾರದ ಮಾರ್ಗಸೂಚಿಯಂತೆ ಮೃತರ ಕುಟುಂಬದಿಂದ ನಾಲ್ಕೈದು ಜನರನ್ನು ಸ್ಮಶಾನಕ್ಕೆ ಕರೆಸಿ, ಅಂತ್ಯ ಸಂಸ್ಕಾರವನ್ನು ಮುಗಿಸಿದ್ದಾರೆ. ಕೊರೊನಾ ಸೋಂಕಿನಿಂದ ಮೃತಪಟ್ಟವರ ಪಟ್ಟಿಯಲ್ಲಿ ಈ ಮೃತ ವ್ಯಕ್ತಿಯ ಹೆಸರು ಸೇರ್ಪಡೆ ಮಾಡಲಾಗುತ್ತದೆ. ಆದರೆ ಈಗ ಕಿಮ್ಸ್ ನೀಡಿರುವ ವರದಿಯಲ್ಲಿ ಈ ಮೃತ ವ್ಯಕ್ತಿಗೆ ಕೋವಿಡ್ ತಪಾಸಣಾ ವರದಿ ನೆಗೆಟಿವ್ ಎಂದು ಬಂದಿದ್ದು, ಮೃತನ ಕುಟುಂಬಸ್ಥರು ಹಾಗೂ ಅಮನ್ ಫೌಂಡೇಶನ್, ಕಿಮ್ಸ್ ವೈದ್ಯರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.