ಬೆಂಗಳೂರು : ಕಳೆದ ಹಲವು ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನರು ಹೈರಾಣಾಗಿದ್ದಾರೆ. ಇದರ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ (karnataka forecast) ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಮತ್ತು ಕರಾವಳಿ ಜಿಲ್ಲೆಗಳಲ್ಲಿ ನಾಳೆ 'ಅರೇಂಜ್ ಅಲರ್ಟ್' (orange alert in karnataka) ನೀಡಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬಳ್ಳಾರಿ, ಕೊಪ್ಪಳ, ಹಾವೇರಿ, ಉತ್ತರಕನ್ನಡ, ಬೆಳಗಾವಿ, ಧಾರವಾಡದಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ ಇದ್ದು, 'ಯೆಲ್ಲೋ ಅಲರ್ಟ್' ನೀಡಲಾಗಿದೆ.
ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದೆ. ಉಳಿದೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಕರ್ನಾಟಕಕ್ಕೆ ಯೆಲ್ಲೋ ಅರ್ಲಟ್ : ಮುಂದಿನ 12 ರಿಂದ 14 ಗಂಟೆಯವರೆಗೆ ಭಾರಿ ಮಳೆಯಾಗಲಿದೆ. ಉತ್ತರಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ (yellow alert in uttara karnataka) ಘೋಷಿಸಲಾಗಿದೆ ಎಂದು ಹವಾಮಾನ ತಜ್ಞ ಡಾ. ಆರ್ ಹೆಚ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಉತ್ತರದ ಜಿಲ್ಲೆಗಳಲ್ಲಿ ಸದ್ಯಕ್ಕೆ ಮಳೆ ಬಿಡುವು ಇಲ್ಲ. ಈಗ ತಾನೇ ಮಳೆ ಮುನ್ಸೂಚನೆ ಬಂದಿದೆ. ಇಂದು ಮಧ್ಯಾಹ್ನದಿಂದ ರಾತ್ರಿವರೆಗೆ ಭಾರೀ ಮಳೆ ಆಗಲಿದೆ. ಧಾರವಾಡ, ಹಾವೇರಿ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹೇಳಿದ್ದಾರೆ.
ಕೊಪ್ಪಳಕ್ಕೆ ಯೆಲ್ಲೋ ಅಲರ್ಟ್, ರೈತರಿಗೆ ತಜ್ಞರ ಸಲಹೆ : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಹವಾಮಾನದಲ್ಲಿ ಭಾರಿ ಬದಲಾವಣೆಯಾಗಿದೆ. ಮುಂದಿನ ಮೂರು ದಿನಗಳ ಕಾಲ ಕೊಪ್ಪಳ ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಇಲ್ಲಿನ ಕೃಷಿ ಸಂಶೋಧನಾ ಕೇಂದ್ರದ ಹವಾಮಾನ ವಿಭಾಗದ ವಿಜ್ಞಾನಿಗಳು ತಿಳಿಸಿದ್ದಾರೆ.
ದಿನಕ್ಕೆ 64.5ರಿಂದ 115.5 ಮಿಲಿ ಮೀಟರ್ಗೂ ಅಧಿಕ ಪ್ರಮಾಣದ ಮಳೆ ಸುರಿಯುತ್ತಿದ್ದರೆ, ಯೆಲ್ಲೋ ಅಲರ್ಟ್ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಕೊಪ್ಪಳ ಜಿಲ್ಲೆಯಾದ್ಯಂತ 60 ಮಿ.ಮೀ. ಮೀಟರ್ಗೂ ಅಧಿಕ ಪ್ರಮಾಣದ ಮಳೆ ನಿರಂತವಾಗಿ ಸುರಿಯುತ್ತಿದೆ ಎಂದು ಕೃಷಿ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಎಂ.ರವಿ ತಿಳಿಸಿದ್ದಾರೆ.
ರೈತರಿಗೆ ತಜ್ಞರ ಸಲಹೆ : ನಿರಂತರ ಮಳೆ ಸುರಿಯಲಿರುವ ಹಿನ್ನೆಲೆ, ಭತ್ತ ಬೆಳೆದ ರೈತರು ಗದ್ದೆಯಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಬಸಿಗಾಲುವೆ ನಿರ್ಮಿಸಿ ಮಳೆ ನೀರನ್ನು ಹೊರಕ್ಕೆ ಹರಿ ಬಿಡಬೇಕು. ಜಾನುವಾರು, ಕೋಳಿ, ಮೇಕೆ ಸೇರಿದಂತೆ ಸಾಕು ಪ್ರಾಣಿಗಳನ್ನು ಕಟ್ಟುವ ಪ್ರದೇಶದಲ್ಲಿ ನೀರು ನಿಲ್ಲದಂತೆ ಜಾಗೃತಿ ವಹಿಸಬೇಕು. ಅಲ್ಲದೇ ಅವುಗಳನ್ನು ಬೆಚ್ಚಗಿನ ವಾತಾವರಣದಲ್ಲಿ ಇರಿಸಬೇಕು ಎಂದು ತಜ್ಞ ಡಾ. ಫಕೀರಪ್ಪ ಅರಭಾವಿ ತಿಳಿಸಿದ್ದಾರೆ.