ಹುಬ್ಬಳ್ಳಿ: ನಗರದ ಖಾಸಗಿ ಹೋಟೆಲ್ನಲ್ಲಿ ಇಂದು ಆಯೋಜಿಸಲಾಗಿದ್ದ ಸಾಂಸ್ಥಿಕ ಚುನಾವಣಾ ವೀಕ್ಷಕರ ಸಭೆಯಲ್ಲಿ ಸಚಿವ ಜಗದೀಶ್ ಶೆಟ್ಟರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಸಚಿವ ಜಗದೀಶ ಶೆಟ್ಟರ್, ಸಿದ್ದರಾಮಯ್ಯನವರಿಗೆ ಜನರ ನಾಡಿ ಮಿಡಿತವೇ ಗೊತ್ತಿಲ್ಲ. ಅಹಂಕಾರದಿಂದ ಸಿದ್ಧರಾಮಯ್ಯ ಮಾತನಾಡುತ್ತಾರೆ. ಈ ಹಿನ್ನೆಲೆ ಸಿದ್ದರಾಮಯ್ಯ ನಾಯಕತ್ವಕ್ಕೆ ಅಂತ್ಯಕಾಲ ಬಂದಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ನವರು ಕೂಸು ಹುಟ್ಟುವ ಮುಂಚೆಯೇ ಕುಲಾಯಿ ಹೊಲಿಸುತ್ತಿದ್ದಾರೆ. ಚುನಾವಣಾ ಫಲಿತಾಂಶ ಬರುವ ಮುಂಚೆಯೇ ಅವರು ಅಧಿಕಾರದ ಕನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ನೀಡಿದಂತಹ ಯೋಜನೆಗಳು ಜನಸಾಮಾನ್ಯರಿಗೆ ಯಾವುದೂ ತಲುಪಿಲ್ಲ. ಉಪ ಚುನಾವಣಾ ಫಲಿತಾಂಶದ ನಂತರ ಬಿಜೆಪಿ ಸರ್ಕಾರವೇ ಮುಂದುವರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಯಾರನ್ನು ಆಪರೇಷನ್ ಕಮಲ ಮಾಡಲ್ಲ:
ಬಿಜೆಪಿ ಯಾರನ್ನು ಆಪರೇಷನ್ ಕಮಲ ಮಾಡುವುದಿಲ್ಲ. ಅವಾರಗಿಯೇ ಬಂದ್ರೆ ನಾವು ಸ್ವಾಗತ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಕಾಂಗ್ರೆಸ್ನಲ್ಲಿ ಶಾಸಕರು ಬೇಸರದಲ್ಲಿದ್ದಾರೆ, ಅಲ್ಲಿಯ ಶಾಸಕರು ಬಂದರೆ ಬಿಜೆಪಿಗೆ ಸೇರಿಸಿಕೊಳ್ಳುವ ಕುರಿತು ವಿಚಾರ ಮಾಡುತ್ತೇವೆ. ನಮ್ಮದು ರಾಜಕೀಯ ಪಕ್ಷ. ಯಾರೇ ಬಂದರು ಸ್ವಾಗತಿಸುತ್ತೇವೆ. ಕಾಂಗ್ರೆಸ್ ಪಕ್ಷದ ನಾಯಕರನ್ನು ದಿನೇಶ್ ಗುಂಡೂರಾವ್ ಹಿಡಿದಿಟ್ಟುಕೊಳ್ಳಲಿ ಎಂದು ಗುಡುಗಿದರು.
ಇನ್ನು ಅನರ್ಹ ಶಾಸಕರಿಗೆ ಮಂತ್ರಿ ಸ್ಥಾನ ನೀಡುವುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಅನರ್ಹ ಶಾಸಕರು ರಾಜೀನಾಮೆ ಕೊಟ್ಟಿದ್ದಕ್ಕೆ ನಮ್ಮ ಸರ್ಕಾರ ಬಂದಿದೆಯೇ ವಿನಾ ಅನರ್ಹ ಶಾಸಕರು ನಮ್ಮ ಪಕ್ಷಕ್ಕೆ ಬಂದಿದ್ದಕ್ಕೆ ನಮ್ಮ ಸರ್ಕಾರ ಬಂದಿಲ್ಲ. ಅನರ್ಹ ಶಾಸಕರಿಗೆ ಟಿಕೆಟ್ ನೀಡಿದ್ದೇವೆ. ಆ ಮೂಲಕ ಒಂದು ಹಂತದ ನ್ಯಾಯ ಕೊಟ್ಟಿದ್ದೇವೆ. ಭಾರತೀಯ ಜನತಾ ಪಾರ್ಟಿ ಉಪ ಚುನಾವಣೆಯಲ್ಲಿ 15ಕ್ಕೆ 15 ಸ್ಥಾನ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.