ಹುಬ್ಬಳ್ಳಿ: ನಗರದ ಗೋಪನಕೊಪ್ಪದ ಶಿವ ಕಾಲೋನಿಯಲ್ಲಿ ರಸ್ತೆ ಕಾಮಗಾರಿ ನಿರ್ಮಾಣ ಹಾಗೂ ಶಿರಡಿ ನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣಕ್ಕೆ ಸಚಿವ ಜಗದೀಶ್ ಶೆಟ್ಟರ್ ಇಂದು ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಒಟ್ಟು ₹21 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆಯನ್ನು ಲೋಕೊಪಯೋಗಿ ಇಲಾಖೆಯ ಎಸ್‌ಸಿಪಿ, ಟಿಎಸ್ಪಿ ಅನುದಾನದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. 200 ಮೀಟರ್ ರಸ್ತೆ ಇದಾಗಿದೆ. ಹುಬ್ಬಳ್ಳಿಯಲ್ಲಿ ಕೆಲವೆಡೆ ನಿರ್ಮಿಸಿರುವ ರಸ್ತೆಗೆ ಪೇವರ್ಸ್ ಹಾಕಲಾಗಿದೆ. ಅವು ಕೂಡ ಕಿತ್ತುಕೊಂಡು ಹೋಗಿವೆ. ಆದ್ದರಿಂದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹಿಂದಿನ ಸರ್ಕಾರ ಗುತ್ತಿಗೆದಾರರಿಗೆ ಬಿಲ್ ಬಾಕಿ ಉಳಿಸಿಕೊಂಡಿದ್ದ ಕಾರಣ ಈಗ ಕಾಮಗಾರಿ ನಿಧಾನವಾಗುತ್ತಿವೆ. ಇದು ಕಾಮಗಾರಿಗಳ ಮೇಲೆ ಪರಿಣಾಮ ಬೀರುತ್ತಿದೆ. ಈಗಿನ ನಮ್ಮ ಸರ್ಕಾರ ಹಂತ ಹಂತವಾಗಿ ಈ ಸಮಸ್ಯೆಯನ್ನು ಪರಿಹರಿಸುತ್ತಿದೆ ಎಂದರು.
ಇನ್ನು, ಶಿರಡಿ ನಗರದಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಬಂಧ ಮಾತನಾಡಿದ ಶೆಟ್ಟರ್, ಮೂರು ಲ್ಯಾಬ್‌ಗಳು, 14 ವರ್ಗ ಕೋಣೆಗಳನ್ನು ಒಳಗೊಂಡಿರುವ ಕಾಲೇಜಿನ ನೂತನ ಕಟ್ಟಡದ ಕಾಮಗಾರಿಯನ್ನು 15 ತಿಂಗಳಲ್ಲಿ ಪೂರ್ಣಗೊಳಿಸಬೇಕು. ಮುಂದಿನ ಬಜೆಟ್‌ನಲ್ಲಿ ಇನ್ನಷ್ಟು ಅನುದಾನ ಒದಗಿಸಲು ಪ್ರಯತ್ನಿಸುತ್ತೇನೆ. ಮಳೆಗಾಲ ಮುಗಿದ ತಕ್ಷಣ ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.