ಹುಬ್ಬಳ್ಳಿ : ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಹಾಗೂ ಜಗದೀಶ್ ಶೆಟ್ಟರ್ ಭೇಟಿ ಏನೂ ವಿಶೇಷತೆ ಇಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಒಂದೇ ಪಕ್ಷದವರು ಭೇಟಿಯಾಗಿ ಮಾತನಾಡುವುದು ಸಹಜ. ಅವರು ಯಾವುದೋ ಕೆಲಸಕ್ಕೆ ಹುಬ್ಬಳ್ಳಿಗೆ ಬಂದಿದ್ದರು. ಹಾಗೆಯೇ ನಮ್ಮ ಮನೆಗೆ ಬಂದು ಭೇಟಿಯಾಗಿದ್ದಾರೆ. ಬೇರೆ ಪಕ್ಷದವರು ಭೇಟಿಯಾದರೆ ವಿಶೇಷ ಎನ್ನಬಹುದು. ವಿಶೇಷ ಇದ್ದರೆ ನಾನೇ ನಿಮಗೆ ಹೇಳುತ್ತಿದ್ದೆ ಎಂದರು.
ಗುಜರಾತ್ನಲ್ಲಿ ಭಗವದ್ಗೀತೆ ಕಲಿಕೆಗೆ ಆದೇಶ ವಿಚಾರವಾಗಿ ಮಾತನಾಡಿದ ಅವರು, ಯಾವ ರೀತಿ ಆದೇಶ ಮಾಡಿದ್ದಾರೋ ನನಗೆ ಗೊತ್ತಿಲ್ಲ. ಆದರೆ, ಭಗವದ್ಗೀತೆ ಕಲಿಯುವುದು ಒಳ್ಳೆಯದು. ಹಿಜಾಬ್ ಬಗ್ಗೆ ಈಗಾಗಲೇ ನ್ಯಾಯಾಲಯ ಆದೇಶ ನೀಡಿದೆ. ಅದನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಬೇಕು.
ಇಲ್ಲದಿದ್ದರೆ, ಅಜಾಗರೂಕತೆ ಉಂಟಾಗುತ್ತದೆ. ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ. ಬೇಕಾದರೆ ಅವರು ಸುಪ್ರೀಂಗೆ ಹೊಗಲಿ. ಅಲ್ಲಿ ಅವರಿಗೆ ನ್ಯಾಯ ಸಿಕ್ಕರೆ ಸಿಗಬಹುದು. ಅದನ್ನು ಬಿಟ್ಟು ನ್ಯಾಯಾಲಯದ ಆದೇಶದ ವಿರುದ್ಧ ಪ್ರತಿಭಟನೆ ಮಾಡುವುದು ತಪ್ಪು. ಯಾಕೆಂದರೆ, ನ್ಯಾಯಾಂಗದ ಮೇಲೆ ಒತ್ತಡ ಹೇರಿದ ಹಾಗೇ ಆಗುತ್ತದೆ ಎಂದರು.
ಇದನ್ನೂ ಓದಿ: ಬಿ.ವೈ. ವಿಜಯೇಂದ್ರ ದೆಹಲಿ ಭೇಟಿಗೆ ಬೇರೆ ಬೇರೆ ಕಾರಣಗಳಿರುತ್ತವೆ: ಶಾಸಕ ಬೆಲ್ಲದ