ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ಒಂದಿಲ್ಲೊಂದು ರೀತಿಯಲ್ಲಿ ಜನಪರ ಕಾಳಜಿ ಹಾಗೂ ಸಾರ್ವಜನಿಕರಿಗೆ ಉತ್ಕೃಷ್ಟ ಗುಣಮಟ್ಟದ ಸೇವೆಯನ್ನು ನೀಡುವ ಮೂಲಕ ಜನಮನ್ನಣೆ ಪಡೆಯುತ್ತಿದೆ. ಈ ಎಲ್ಲಾ ಕಾರ್ಯಕ್ಕೆ ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿಗೆ ಮತ್ತೊಂದು ಗೌರವದ ಗರಿ ಬಂದಿದೆ.
ಲಾಕ್ಡೌನ್ ಸಂದರ್ಭದಲ್ಲಿ ಶ್ರಮಿಕ ಎಕ್ಸ್ಪ್ರೆಸ್ ಮೂಲಕ ಕಾರ್ಮಿಕರನ್ನು ಅವರ ತವರೂರಿಗೆ ತಲುಪಿಸುವ ಕಾರ್ಯ ಮಾಡಿತ್ತು. ಜೊತೆಗೆ ಸರಕು ಸಾಗಣೆ ಮೂಲಕ ದೇಶದ ವಿವಿಧ ಮೂಲೆಗಳಿಗೆ ಆಹಾರ ಹಾಗೂ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವ ಮೂಲಕ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕಾರ್ಯದಕ್ಷತೆ ಮೆರೆದಿತ್ತು. ಇದೀಗ ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿಯ ವಿಪತ್ತು ನಿರ್ವಹಣೆ ಹಾಗೂ ಉತ್ತಮ ನಿರ್ವಹಣೆಗೆ ಐಎಸ್ಒ ಮಾನ್ಯತೆ ಲಭಿಸಿದೆ. ಐಎಸ್‌ಒ 9001:2015 ಮಾನ್ಯತೆಯನ್ನು ಪಡೆದಿರುವುದರಲ್ಲಿ ನೈಋತ್ಯ ರೈಲ್ವೆ ಹುಬ್ಬಳ್ಳಿಯೇ ಮೊದಲ ಸ್ಥಾನದಲ್ಲಿರುವುದು ವಿಶೇಷವಾಗಿದೆ.
ರೈಲ್ವೆ ವ್ಯವಸ್ಥಾಪಕ ನಿರ್ದೇಶಕ ಅಜಯ್ಕುಮಾರ್ ಸಿಂಗ್ ಹಾಗೂ ಸಹಾಯಕ ವ್ಯವಸ್ಥಾಪಕ ನಿರ್ದೇಶಕಿ ಇ. ವಿಜಯಾ ಅವರ ನಿರ್ದೇಶನದಲ್ಲಿ ಉತ್ತಮ ತುರ್ತು ನಿರ್ವಹಣೆ ಮಾಡಲಾಗಿತ್ತು.