ಹುಬ್ಬಳ್ಳಿ: ಒಳಚರಂಡಿ ಸಮಸ್ಯೆ ಪರಿಹರಿಸುವ ಮೂಲಕ ಮಹಾನಗರ ಪಾಲಿಕೆ ಮಾಡುವ ಕಾರ್ಯವನ್ನು ಆಮ್ ಆದ್ಮಿ ಪಕ್ಷದ ಮುಖಂಡರು ಮಾಡಿ ತೋರಿಸಿದ್ದಾರೆ.
ನಗರದ ಗೋಕುಲ ರಸ್ತೆಯ ಗಾಂಧಿನಗರದಲ್ಲಿನ ಒಳಚರಂಡಿ ಕೆಟ್ಟು ಹೋಗಿ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆಗೆ ಒಳಗಾಗಿದ್ದರು. ಕಳೆದ ಮೂರು ತಿಂಗಳುಗಳಿಂದ ಕೆಟ್ಟು ಹೋಗಿ ಗಬ್ಬು ವಾಸನೆಯಿಂದ ಸ್ಥಳೀಯರು ಪಡಿಪಾಟಿಲು ಅನುಭವಿಸುತ್ತಿದ್ದರು. ಈ ವೇಳೆ ಸ್ಥಳೀಯರು ಪಾಲಿಕೆಗೆ ಹಲವು ಬಾರಿ ತಿಳಿಸಿದರು ಸಹಿತ ಯಾವುದೇ ಸ್ಪಂದನೆ ದೊರೆತಿರಲಿಲ್ಲ.
ಆಗ ಸ್ಥಳೀಯ ನಿವಾಸಿಗಳು ಎಎಪಿ ಮುಖಂಡರಿಗೆ ಸಮಸ್ಯೆ ತಿಳಿಸಿದಾಗ ಕೂಡಲೇ ಕಾರ್ಯಪ್ರವೃತರಾದ ಆಪ್ ಕಾರ್ಯಕಾರಿ ಸಮಿತಿ ಸದಸ್ಯ ಶಿಶಿಕುಮಾರ ಸುಳ್ಳದ ಹಾಗೂ ಕಾರ್ಯಕರ್ತರು ಪಾಲಿಕೆಯ ಅಭಿಯಂತರಿಗೆ ವಿಷಯ ತಿಳಿಸಿ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಒಳಚರಂಡಿಯನ್ನು ದುರಸ್ತಿ ಮಾಡಿಸಿದ್ದಾರೆ.
ಇಲ್ಲಿನ ಒಳಚರಂಡಿ ಸಮಸ್ಯೆಗೆ ತಾತ್ಕಾಲಿಕವಾಗಿ ಪರಿಹಾರ ಸಿಕ್ಕಿದ್ದು, ಇದಕ್ಕೆ ಸಂಬಂಧಿಸಿದಂತೆ ಶಾಶ್ವತ ಪರಿಹಾರವನ್ನು ಪಾಲಿಕೆ ಆದಷ್ಟು ಬೇಗ ಮಾಡುವಂತೆ ಸ್ಥಳೀಯ ನಿವಾಸಿಗಳು, ಎಎಪಿ ಮುಖಂಡರು ಮತ್ತು ಕಾರ್ಯಕರ್ತರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡ ಮಹಬೂಬ ಹರವಿ, ಯುವ ಕಾರ್ಯಕರ್ತ ಡೇನಿಯಲ್ ಐಕೋಸ್, ವೀರೇಂದ್ರ ಸಾಂಬ್ರಾಣಿ ಹಾಗೂ ಗಾಂಧಿನಗರದ ನಿವಾಸಿಗಳು ಇದ್ದರು.