ಹುಬ್ಬಳ್ಳಿ: ಕೊರೊನಾ ಸೋಂಕಿನ ಹಿನ್ನೆಲೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅತ್ಯಂತ ಸರಳವಾಗಿ ಈ ಬಾರಿ 11ನೇ ಗಣೇಶ ಮೂರ್ತಿ ನಿಮಜ್ಜನ ಮಾಡಲಾಯಿತು.
ಅದ್ಧೂರಿಯಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ 11 ದಿನಗಳ ನಂತರ ಡಿಜೆ ಸದ್ದಿನಲ್ಲಿ ಕುಣಿದು ಕುಪ್ಪಳಿಸಿ ಹುಬ್ಬಳ್ಳಿ ಕಾ ರಾಜಾ, ಹುಬ್ಬಳ್ಳಿ ಕಾ ಮಹಾರಾಜ, ಗೌಳಿ ಗಲ್ಲಿ ರಾಜಾ ಸೇರಿದಂತೆ ಸುಮಾರು 67ಕ್ಕೂ ಹೆಚ್ಚು ಗಣೇಶ ಮೂರ್ತಿ ನಿಮಜ್ಜನ ಮಾಡಲಾಗುತ್ತಿತ್ತು.
ಆದರೆ ಈ ವರ್ಷ ಕೊರೊನಾ ಹಾವಳಿಯಿಂದಾಗಿ ಸರಳವಾಗಿ ಗಣೇಶೋತ್ಸವ ಆಚರಿಸಲಾಯಿತು. ಜತೆಗೆ ಮತ್ತಿತರ ನೂರಾರು ಸಂಘಟನೆಗಳ ಯುವಕರು ನಗರದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸುತ್ತಿದ್ದ ಗಣೇಶೋತ್ಸವ ವೈಭವ ಕಾಣಲಿಲ್ಲ.
ನಗರದಲ್ಲಿ ಧರ್ಮ ರಕ್ಷಣೆಯ ಸಂದೇಶ ಹೊತ್ತ ಬಾಲಗಂಗಾಧರ ತಿಲಕ್ ವಿನಾಯಕ ವಿಸರ್ಜನಾ ಸಮಿತಿ ವಿನಾಯಕೋತ್ಸವಕ್ಕೆ ಕೊರೊನಾ ಮಾರಿ ಅಡ್ಡಿಯಾಗಿದ್ದು, ಸರಳವಾಗಿ ಗಣೇಶೋತ್ಸವ ಆಚರಣೆ ಮಾಡುವ ಮೂಲಕ ಅದ್ಧೂರಿಗೆ ಕಡಿವಾಣ ಹಾಕಲಾಯಿತು.