ಹುಬ್ಬಳ್ಳಿ : ನಗರದ ವಾರ್ಡ್ ನಂಬರ್ 64ರ ಗೌಸಿಯಾ ಕಾಲೋನಿಯಲ್ಲಿ ಹಾದು ಹೋಗಿರುವ ರಾಜ ಕಾಲುವೆ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಗಬ್ಬೆದ್ದು ನಾರುತ್ತಿದೆ. ಮೂಗು ಮುಚ್ಚಿಕೊಂಡೇ ಇಲ್ಲಿನ ನಿವಾಸಿಗಳು ಬದುಕು ಸಾಗಿಸಬೇಕಾದ ಪ್ರಸಂಗ ಬಂದಿದೆ.
ರಾಜಕಾಲುವೆಯಲ್ಲಿ ಕೊಳಚೆ ನೀರು ಹರಿದು ಹೋಗುತ್ತಿರುವುದರಿಂದ ಕಸಕಡ್ಡಿಗಳು, ಪ್ಲಾಸ್ಟಿಕ್ ಮತ್ತು ರಾತ್ರೋರಾತ್ರಿ ತಂದು ಸುರಿಯುವ ತ್ಯಾಜ್ಯ ವಸ್ತುಗಳು ನೀರು ಹರಿದು ಹೋಗಲು ಅಡ್ಡಿಯಾಗುತ್ತವೆ. ಇದರಿಂದಾಗಿ ಸಣ್ಣದಾಗಿ ಮಳೆ ಬಂದರೂ ಕಾಲುವೆ ಕಟ್ಟಿಕೊಂಡು ನೀರು ರಸ್ತೆ ಮೇಲೆ ಹರಿದು ಮನೆಯೊಳಗೆ ನೀರು ನುಗ್ಗುತ್ತಿದೆ.
ಸುಮಾರು ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿರುವ ಇಲ್ಲಿನ ನಿವಾಸಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅದೆಷ್ಟೋ ಬಾರಿ ತಡೆಗೋಡೆ ನಿರ್ಮಿಸುವಂತೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಗೌಸಿಯಾ ನಗರ ಅಷ್ಟೇ ಅಲ್ಲ, ಈ ರಾಜ ಕಾಲುವೆ ಇಬ್ರಾಹಿಂಪುರ, ಎಸ್ ಎಂ ಕೃಷ್ಣ ನಗರದಲ್ಲಿ ಹಾದು ಹೋಗಿದೆ. ದಾರಿಗುಂಟ ಹಲವಾರು ಸಮಸ್ಯೆಗಳನ್ನು ಸೃಷ್ಟಿಸಿದೆ.
ಓದಿ-ವಿಧಾನ ಪರಿಷತ್‌ನಲ್ಲಿ ಕುಳಿತು 'ಅಸಹ್ಯ' ವಿಡಿಯೋ ನೋಡಿದ್ರಾ MLC ಪ್ರಕಾಶ್ ರಾಥೋಡ್!?
ಕಾಲುವೆಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಪಾಲಿಕೆ ಮಾಡುತ್ತಿಲ್ಲ. ಕೇಳಿದ್ರೆ ಕೇವಲ ಹಾರಿಕೆ ಉತ್ತರ ನೀಡುತ್ತಿದೆ. ರಾಜ ಕಾಲುವೆಯಿಂದ ಹರಡುವ ದುರ್ವಾಸನೆಗೆ ಜನರು ಮೂಗು ಮುಚ್ಚಿಕೊಂಡು ತಿರುಗುವಂತಾಗಿದೆ. ಅಲ್ಲದೆ ಕೋವಿಡ್ ಭೀತಿಯಲ್ಲಿರುವ ಜನರಿಗೆ ಸೊಳ್ಳೆಗಳಿಂದ ಕಾಯಿಲೆ ಹರಡುವ ಆತಂಕ ಎದುರಾಗಿದೆ.
ಸ್ಮಾರ್ಟ್ ಸಿಟಿಯಾಗುತ್ತಿರುವ ನಗರ ಬರೀ ಹೊರಗಡೆಯಿಂದ ನೋಡಲು ಸ್ಮಾರ್ಟಾಗಿ ಕಂಡರೆ ಸಾಲದು, ಒಳಗಡೆಯಿಂದಲೂ ಸ್ಮಾರ್ಟ್ ಇರಬೇಕು. ಅದಷ್ಟು ಬೇಗ ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಕೆಲಸವನ್ನು ಅಧಿಕಾರಿ ವರ್ಗ ಮಾಡಬೇಕು ಅಂತಾ ಸ್ಥಳೀಯರು ಆಗ್ರಹಿಸಿದರು.