ಹುಬ್ಬಳ್ಳಿ: ವೈದ್ಯರ ಮೇಲೆ ರೋಗಿಗಳ ಸಂಬಂಧಿಕರು ಹಲ್ಲೆ ನಡೆಸಿದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಷನರ್ (Police Commissioner)ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ನಗರದಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಷನರ್ ಲಾಬು ರಾಮ್ ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ರಕ್ಷಣೆ ಕೋರಿ ವೈದ್ಯರು ಸಲ್ಲಿಸಿದ ಮನವಿ ಮೇರೆಗೆ ಇನ್ನು ಮುಂದೆ ವೈದ್ಯರ ಮೇಲೆ ನಡೆಸಿದ ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ಸೂಚಿಸಿದ ಹಿನ್ನೆಲೆ ಅದರಂತೆ ನಡೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರೇಮ ಪ್ರಕರಣ: ಯುವಕನನ್ನು ಮರಕ್ಕೆ ಕಟ್ಟಿ, ಹೊಡೆದು ಕೊಂದ ಯುವತಿ ಸಂಬಂಧಿಕರು
ವೈದ್ಯರ ಮೇಲೆ ನಡೆಯುವ ಹಲ್ಲೆ ತಡೆಗಟ್ಟಲು ಕೋರಿ ನಗರದ ಖ್ಯಾತ ಮನೋರೋಗ ತಜ್ಞ ಡಾ.ವಿನೋದ್ ಕುಲಕರ್ಣಿ ಅವರು ಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ವೈದ್ಯರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಅಲ್ಲದೇ, ನಗರದ ಕಿಮ್ಸ್ ಸೇರಿ ಎಲ್ಲ ಆಸ್ಪತ್ರೆಗಳಲ್ಲಿ ಪೊಲೀಸ್ ಠಾಣಿಯ ದೂರವಾಣಿ ಸಂಖ್ಯೆ, ಕಂಟ್ರೋಲ್ ರೂಮ್ ನಂಬರ್ ಪ್ರಚುರ ಪಡಿಸುವಂತೆ ನ್ಯಾಯಾಲಯ ಹೇಳಿತ್ತು.
ಈ ಹಿನ್ನೆಲೆಯಲ್ಲಿ ಹು-ಧಾ ಪೊಲೀಸ್ ಕಮಿಷನರೇಟ್, ರಕ್ಷಣೆ ಕೋರಿದ ಡಾ.ವಿನೋದ್ ಕುಲಕರ್ಣಿ ಅವರಿಗೆ ಪತ್ರ ಬರೆದು ತಮಗೆ ತೊಂದರೆಯಾದಲ್ಲಿ ದೂರವಾಣಿ ಸಂಖ್ಯೆ ಅಥವಾ ತುರ್ತು ಸಹಾಯವಾಣಿ ಸಂಖ್ಯೆ 112ಗೆ ಕರೆ ಮಾಡಿದರೆ ಸೂಕ್ತ ರಕ್ಷಣೆ ನೀಡಲಾಗುವುದು ಎಂದು ಭರವಸೆ ನೀಡಿದೆ.